ಬಿಜೆಪಿ ಯುವ ಮೋರ್ಚಾಕ್ಕೆ ಸಾಮೂಹಿಕ ರಾಜೀನಾಮೆ

27 ckm 2 web
Published on

ಚಿಕ್ಕಮಗಳೂರು: ಸುಳ್ಯ ತಾಲೂಕಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಹರವಿನಗಂಡಿ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಬೆಳಗ್ಗೆ ಸಭೆ ಸೇರಿದ ಯುವ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಮೂಲಕ ಜಿಲ್ಲಾಧ್ಯಕ್ಷರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ನಂತರ ಬಿಜೆಪಿ ಕಚೇರಿಯಿಂದ ಆಜಾದ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಹತ್ಯೆ ಮಾಡಿದವರನ್ನು ಎನ್​ಕೌಂಟರ್ ಮಾಡುವಂತೆ ಒತ್ತಾಯಿಸಿದರು. ಸಂದೀಪ್ ಹರವಿನಹಂಡಿ ಮಾತನಾಡಿ, ಪ್ರವೀಣ್ ನೆಟ್ಟಾರು ಹತ್ಯೆ ಹಿಂದೆ ರಾಜ್ಯದಲ್ಲಿ ಕೋಮುವಾದ ಬಿತ್ತಲು ಎಸ್​ಡಿಪಿಐ, ಪಿಎಫ್​ಐ, ಅನ್ಯ ಕೋಮಿನ ಸಂಘಟನೆಗಳ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೋಮುವಾದಕ್ಕೆ ಕುಮ್ಮಕ್ಕು ಕೊಡಲು ಕೆಲ ಸಂಘಟನೆಗಳು, ಸಮಾಜಘಾತುಕ ಶಕ್ತಿಗಳು ಕೃತ್ಯ ಎಸಗುತ್ತಿರಬಹುದು. ಹತ್ಯೆ ಮಾಡಿದವರು, ಕುಮ್ಮಕ್ಕು ನೀಡಿದವರನ್ನು ಶೂಟೌಟ್ ಮಾಡಲು ಗೃಹ ಸಚಿವರು ಆದೇಶಿಸಬೇಕು. ಹಾಗೆ ಮಾಡಿದರೆ ಮಾತ್ರ ಬಿಜೆಪಿ ಕಾರ್ಯಕರ್ತರಿಗೆ ಧೈರ್ಯ ತುಂಬಿದಂತಾಗುತ್ತದೆ ಎಂದರು. ಬಿಜೆಪಿ ಯುವ ಕಾರ್ಯಕರ್ತರು ಪಕ್ಷಕ್ಕಾಗಿ ಜೀವ ತ್ಯಾಗ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಹರ್ಷನ ಹತ್ಯೆ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಹಿಂದು ಯುವಕರ ಹತ್ಯೆಯಾಗಿದೆ. ಅವರೆಲ್ಲ ಪಕ್ಷಕ್ಕೆ ಬದ್ಧರಾಗಿದ್ದವರು ಎಂದು ಹೇಳಿದರು. ಯುವ ಮೋರ್ಚಾ ಜಿಲ್ಲಾ ಖಜಾಂಚಿ ಕಾಂಚನ್ ಗೌಡ ಮಾತನಾಡಿ, ಬಿಜೆಪಿಯಲ್ಲಿ ಹಾಗೂ ಸಂಘ ಪರಿವಾರದಲ್ಲಿ ಹೆಚ್ಚಾಗಿ ಗುರುತಿಸಿಕೊಂಡವರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net