ಬಿಜೆಪಿ ಮುತ್ತಿಗೆಗೆ ಖಾಕಿ ಪಡೆ ಪ್ರತಿ ಮುತ್ತಿಗೆ

BJP
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 49;
Published on

ಚಿತ್ರದುರ್ಗ: ದೇಶದಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ವೇಳೆ ತುರ್ತು ಪರಿಸ್ಥಿತಿ ಹೇರಿ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ನಗರದ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಮುನ್ನ ಪೊಲೀಸರು ಅಡ್ಡಗಟ್ಟಿ ಪ್ರತಿಯಾಗಿ ಮುತ್ತಿಗೆ ಹಾಕಿ ತಡೆದರು.

ಬಿಜೆಪಿಗರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು. ಕಚೇರಿಗೆ ಮುತ್ತಿಗೆ ಹಾಕಿ ಬಿತ್ತಿಪತ್ರ ಅಂಟಿಸಲಿದ್ದಾರೆ ಎಂಬ ಮಾಹಿತಿ ಮೇರೆಗೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಮುಂಜಾಗ್ರತಾ ಕ್ರಮವಾಗಿ ಬೆಳಗ್ಗೆ 7ರಿಂದಲೇ ಕಚೇರಿ ಮುಂಭಾಗ ಬ್ಯಾರಿಕೇಡ್‌ಗಳನ್ನು ಹಾಕಿ ಸರ್ಪಗಾವಲು ನಿರ್ಮಿಸಲಾಗಿತ್ತು.

ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದು ಕಾಂಗ್ರೆಸ್ಸಿಗರಿಗೆ ಹೊಸತೇನಲ್ಲ. ಇದಕ್ಕೆ ತುರ್ತು ಪರಿಸ್ಥಿತಿ ಹೇರಿ ವಿಪಕ್ಷದವರನ್ನು ಜೈಲಿಗಟ್ಟಿದ್ದಲ್ಲದೆ, ಮಾಧ್ಯಮ ಸ್ವಾತಂತ್ರ್ಯ ಕಸಿದುಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಸಂವಿಧಾನವನ್ನೇ ಬುಡಮೇಲು ಮಾಡಿದ್ದರು. ಹೀಗಾಗಿ ಇಂದಿರಾಗಾಂಧಿ ಅವರ ಮೊಮ್ಮಗ ರಾಹುಲ್‌ಗಾಂಧಿ ಅವರು ಭಾರತೀಯರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ತುರ್ತು ಪರಿಸ್ಥಿತಿ ನೆನಪಿಸಿಕೊಂಡರೆ ಈಗಲೂ ಕಣ್ಣ ಮುಂದೆ ಕರಾಳ ದಿನ ಬಂದಂತಾಗುತ್ತದೆ. ರಾಜ್ಯದ ಸಿಎಂ ಕೂಡ ಒಂದು ರೀತಿ ತುರ್ತು ಪರಿಸ್ಥಿತಿ ಹೇರುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಕೊಲೆ, ಸುಲಿಗೆ, ಕಳ್ಳತನ, ಮಹಿಳೆಯರ ಮೇಲಿನ ದೌರ್ಜನ್ಯಗಳೇ ನಿದರ್ಶನವಾಗಿವೆ ಎಂದು ಕಿಡಿಕಾರಿದರು.

ತುರ್ತು ಪರಿಸ್ಥಿತಿ ಇನ್ನೆಂದೂ ದೇಶದಲ್ಲಿ ಮರುಕಳಿಸಬಾರದು. ಈಗಾಗಲೇ ಕಾಂಗ್ರೆಸ್ ಸ್ವಾರ್ಥಕ್ಕಾಗಿ ಸಂವಿಧಾನ ದುರ್ಬಳಕೆ ಮಾಡಿಕೊಂಡು ಅಪಚಾರ ಮಾಡಿದೆ. ಇದನ್ನು ವಿರೋಧಿಸಿದ್ದ ಸಿದ್ದರಾಮಯ್ಯ ಅವರು ಈಗ ಮೌನಕ್ಕೆ ಜಾರಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕಮಲ ಪಡೆ ಕಾರ್ಯಕರ್ತರಿಗೂ, ಪೊಲೀಸ್ ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು. ಇದೇ ವೇಳೆ ಮುಖಂಡ ಸಂಪತ್ ಬಿತ್ತಿಪತ್ರವೊಂದನ್ನು ಕಚೇರಿಯತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರು. 25 ಮಂದಿ ಪ್ರತಿಭಟನಾಕಾರರನ್ನು ತಡೆಯಲು 80 ಜನ ಪೊಲೀಸರನ್ನು ನಿಯೋಜಿಸಲಾಗಿತ್ತು. ನೆರೆದಿದ್ದವರನ್ನು ವಶಕ್ಕೆ ಪಡೆದು ಗ್ರಾಮಾಂತರ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆಗೊಳಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್, ನಗರಸಭೆ ಸದಸ್ಯ ಹರೀಶ್, ಮುಖಂಡರಾದ ಜಿ.ಟಿ.ಸುರೇಶ್ ಸಿದ್ದಾಪುರ, ಜಿ.ಎಸ್.ಸಂಪತ್‌ಕುಮಾರ್, ಕೆ.ಮಲ್ಲಿಕಾರ್ಜುನ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ, ಜಿ.ಎಚ್.ಮೋಹನ್, ಜಿ.ಎಸ್.ಕಲ್ಲೇಶಯ್ಯ, ನಂದಿ ನಾಗರಾಜ್, ಛಲವಾದಿ ತಿಪ್ಪೇಸ್ವಾಮಿ, ಚಂದ್ರು, ಪರಶುರಾಮ್, ಕಲ್ಲಂಸೀತಾರಾಮರೆಡ್ಡಿ, ಎನ್.ವೀಣಾ, ಶಾಂತಮ್ಮ, ಅರುಣಾಕುಮಾರಿ, ಸುಮಾ, ಕಾಂಚನಾ, ನಾಗರಾಜ್, ಅಭಿಲಾಷ್, ಕೆ.ಸಿ.ತಿರುಮಲೇಶ, ತಿಪ್ಪೇರುದ್ರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net