ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟನೆ

22arsph1ep
Published on

ಅರಸೀಕೆರೆ: ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದರೂ ಅನಗತ್ಯ ಟೀಕೆ, ಟಿಪ್ಪಣಿ ಮಾಡುತ್ತಿರುವುದು ಬೇಸರ ತರಿಸಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.


ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕ ಪ್ರೀತಂ ಜೆ. ಗೌಡ ಹಾಗೂ ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ವಿರುದ್ಧ ಸೋಮವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಬಹುಗ್ರಾಮ ಕುಡಿಯುವ ನೀರು ಯೋಜನೆ, ಕಾಂಕ್ರೀಟ್ ರಸ್ತೆ ನಿರ್ಮಾಣ ಸೇರಿದಂತೆ ಹಲವು ಜನಪರ ಕೆಲಸಗಳನ್ನು ಮಾಡಿದ್ದೇನೆ. ಇದನ್ನು ಸಹಿಸದ ಕೆಲ ಬಿಜೆಪಿ ಮುಖಂಡರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಬಿಜೆಪಿ ಮುಖಂಡರು ನಡೆಸಿದ್ದ ಪ್ರತಿಭಟನೆ ವೇಳೆ ರಾಗಿ ಕಳ್ಳ ಎಂದು ಬಹಿರಂಗ ಹೇಳಿಕೆ ನೀಡಿ ಮನಸ್ಸಿಗೆ ನೋವುಂಟು ಮಾಡಿದ್ದರು. ಆದ್ದರಿಂದ ಆ.29ರಂದು ಧರ್ಮಸ್ಥಳಕ್ಕೆ ತೆರಳಿ ಆಣೆ ಪ್ರಮಾಣ ಮಾಡುತ್ತೇನೆ. ಕಾರ್ಯಕರ್ತರು ಆಗಮಿಸಬಹುದು. ಅನಗತ್ಯ ಟೀಕೆ, ಟಿಪ್ಪಣಿ ಕೇಳಿ ಬಂದ ಹಿನ್ನೆಲೆಯಲ್ಲಿ ಹಿತೈಷಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಉದ್ಯಮಿ ಅರುಣ್‌ಕುಮಾರ್ ಮಾತನಾಡಿ, ಹಿಂದಿನ ಯಾವ ಶಾಸಕರು ಮಾಡದ ಕೆಲಸಗಳನು ್ನಕೆ.ಎಂ.ಶಿವಲಿಂಗೇಗೌಡ ಕೇವಲ 15 ವರ್ಷಗಳಲ್ಲಿ ಮಾಡಿದ್ದಾರೆ ಎಂದರು. ಜಿಪಂ ಮಾಜಿ ಸದಸ್ಯ ಬಿಳಿಚೌಡಯ್ಯ ಸೇರಿ ಹಲವರು ಮಾತನಾಡಿದರು.

ಇದಕ್ಕೂ ಮೊದಲು ಹಾಸನ ರಸ್ತೆಯ ಅಯ್ಯಪ್ಪಸ್ವಾಮಿ ದೇಗುಲದ ಬಳಿಯಿಂದ ಕೆಎಸ್‌ಆರ್‌ಟಿಸಿ ಡಿಪೋವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಸೇರಿ ಹಲವೆಡೆ ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದ್ದು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net