

ಹನೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಏಕಪಕ್ಷೀಯವಾಗಿ ನಡೆದಿದೆ. ಷೇರುದಾರರನ್ನು ಕೈ ಬಿಡಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು. ಬೇಕಾದರೆ ದಾಖಲೆಯೊಂದಿಗೆ ಸಾಬೀತುಪಡಿಸಲಿ ಎಂದು ಮಾಜಿ ಶಾಸಕ ಆರ್.ನರೇಂದ್ರ ಸವಾಲು ಎಸೆದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ನೂತನ ಪಿಎಸಿಸಿ ನಿರ್ದೇಶಕರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಹಕಾರ ಕ್ಷೇತ್ರ ರೈತರ ಸ್ವತ್ತು. ಈ ಮೂಲಕ ರೈತರು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ಇಲ್ಲಿ ಪರಸ್ಪರ ಅನ್ಯೋನ್ಯತೆ ಇರಬೇಕೇ ಹೊರತು ರಾಜಕೀಯವಲ್ಲ. ಇದರಿಂದ ಸಂಘವು ಅಭಿವೃದ್ಧಿ ಹೊಂದುವುದರ ಜತೆಗೆ ಯಾವುದೇ ಮನಸ್ತಾಪವಿಲ್ಲದೆ ರೈತರು ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಹನೂರಿನ ಪಿಎಸಿಸಿಯಲ್ಲಿ ಕಳೆದ 25 ವರ್ಷಗಳಿಂದ ಚುನಾವಣೆ ನಡೆದಿರಲಿಲ್ಲ. ಎಲ್ಲರ ವಿಶ್ವಾಸವನ್ನು ಪಡೆದುಕೊಂಡು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಇದರಿಂದ ಸಂಘವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಆದರೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಾನು ಜಯ ಗಳಿಸಿದ್ದನ್ನು ಸಹಿಸದ ಮುಖಂಡರೊಬ್ಬರು ಸರ್ವಾಧಿಕಾರಿ ಧೋರಣೆಯಿಂದ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದುದು. ಸಂಘದ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಬೇಕಾದರೆ ಇಲಾಖೆಯು ಅಧಿಸೂಚನೆ ಹೊರಡಿಸುತ್ತದೆ. ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. ಅಂತಹುದರಲ್ಲಿ ಇಂತಹ ಆರೋಪ ಎಷ್ಟರ ಮಟ್ಟಿಗೆ ಸರಿ? ಎಂದರು.
ಇನ್ನು ಸಂಘದಲ್ಲಿ 300ಕ್ಕೂ ಹೆಚ್ಚು ಷೇರುದಾರರನ್ನು ಚುನಾವಣೆ ಉದ್ದೇಶದಿಂದ ಕೈ ಬಿಡಲಾಗಿದೆ ಎಂದು ಆರೋಪಿಸಿದ್ದಾರೆ. ಸಂಘದಲ್ಲಿ ಕಾಲ ಕಾಲಕ್ಕೆ ಷೇರು ಹೆಚ್ಚಳವಾಗುತ್ತದೆ. ಈ ಸಂಬಂಧ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸುತ್ತಾರೆ. ವಾರ್ಷಿಕ ಮಹಾಸಭೆಯಲ್ಲಿ ಮಾಹಿತಿ ಒದಗಿಸುತ್ತಾರೆ. ಜತೆಗೆ ಪ್ರತಿಯೊಬ್ಬರಿಗೂ ಸೂಚನಾ ಪತ್ರವನ್ನು ಕಳುಹಿಸಲಾಗುತ್ತದೆ. ಹೀಗಿರುವಾಗ ಷೇರುದಾರರನ್ನು ಕೈ ಬಿಡಲು ಹೇಗೆ ಸಾಧ್ಯ? ಇದನ್ನು ತಿಳಿಯದೇ ಆರೋಪಿಸಿರುವುದು ಸರಿಯಲ್ಲ. ಈ ಬಗ್ಗೆ ದಾಖಲೆಗಳಿದ್ದಲ್ಲಿ ಸಾಬೀತುಪಡಿಸಲಿ. ಇಲ್ಲವಾದಲ್ಲಿ ಸಹಕಾರ ಕ್ಷೇತ್ರಕ್ಕೆ ತಲೆಹಾಕಬಾರದು ಎಂದು ತಿರುಗೇಟು ನೀಡಿದರು.
ಪಿಎಸಿಸಿ ನಿರ್ದೇಶಕ ಶ್ರೀನಿವಾಸಗೌಡ, ಅನಿಲ್‌ಕುಮಾರ್, ನಟರಾಜು, ಪಪಂ ಸದಸ್ಯರಾದ ಗಿರೀಶ್, ಹರೀಶ್‌ಕುಮಾರ್, ಬಸವರಾಜು, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ಮುಖಂಡರಾದ ಮಲ್ಲುಸ್ವಾಮಿ, ಜಗದೀಶ್, ನಾಗೇಶ್ ಹಾಗೂ ಇನ್ನಿತರರಿದ್ದರು.