

ಹಾಸನ: ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಮುಖಂಡನ ಋಣ ತೀರಿಸಲು ಹಾಸನ ಸುತ್ತ ಮುತ್ತಲಿನ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಲು ಕಾನೂನು ಉಲ್ಲಂಘಿಸಿ ಸಂಸದರ ಒತ್ತಡ ಹಾಕಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಆರೋಪಿಸಿದರು.
ಕೆಐಎಡಿಬಿಗೆ ಸೇರಿದ ನಿವೇಶ ಸಂಖ್ಯೆ 221ರಲ್ಲಿ 1 ಎಕರೆ 38 ಗುಂಟೆ ಜಾಗವನ್ನು ಪಾರ್ಕ್ ನಿರ್ಮಾಣಕ್ಕಾಗಿ ಮೀಸಲಿಡಲಾಗಿತ್ತು. ಈ ಮೊದಲು ಕೆಐಎಡಿಬಿ ಅಧಿಕಾರಿಗಳು ವೇರ್‌ಹೌಸ್ ಮಾಲೀಕರಿನಿಗೆ ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ಈ ಜಾಗವು ಕಲ್ಲು ಬಂಡೆಗಳಿಂದ ಕೂಡಿದ್ದು, ಪಾರ್ಕ್ ಅಭಿವೃದ್ಧಿ ಪಡಿಸಲು ಸೂಕ್ತವಾಗಿಲ್ಲ ಎಂಬ ಸುಳ್ಳು ವರದಿ ನೀಡಿ ವೇರ್‌ಹೌಸ್ ಮಾಲೀಕ ಜಗದೀಶ್ ಎಂಬುವರಿಗೆ 2013ರಲ್ಲಿ ಮಂಜೂರು ಮಾಡಿಕೊಟ್ಟಿದ್ದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿದರು.
ಇದನ್ನು ಪ್ರಶ್ನಿಸಿ ಸ್ಥಳೀಯರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಹೀಗಾಗಿ ಕಳೆದ 10 ವರ್ಷಗಳಿಂದ ಆ ಸ್ಥಳದಲ್ಲಿ ಯಾವುದೇ ಕಟ್ಟಡ ಕಾಮಗಾರಿ ನಡೆಯದಂತೆ ನೋಡಿಕೊಳ್ಳಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ನಿವೇಶನವನ್ನು ಹಿಂಪಡೆದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 2023ರಲ್ಲಿ ಸೂಚಿಸಿತ್ತು. ಹೀಗಾಗಿ ಮತ್ತೊಮ್ಮೆ ಕೆಐಎಡಿಬಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಈ ನಿವೇಶನದಲ್ಲಿ ಕಲ್ಲು ಬಂಡೆಗಳು ಕಂಡುಬಂದಿಲ್ಲ, ನಿವೇಶನವು ಕೈಗಾರಿಕಾ ಪ್ರದೇಶದ ಮಧ್ಯಭಾಗದಲ್ಲಿರುವುದರಿಂದ ಪಾರ್ಕ್ ನಿರ್ಮಾಣ ಮಾಡಲು ಸೂಕ್ತವಾಗಿದೆ ಎಂದು ವರದಿ ನೀಡಿದ್ದಾರೆ. ಆದರೆ, ಇತ್ತೀಚೆಗೆ ಹೈಕೋರ್ಟ್ ಆದೇಶ ಉಲ್ಲಂಘಿಸಿ ಪಾರ್ಕ್‌ಗೆ ಮೀಸಲಾಗಿದ್ದ ಜಾಗದಲ್ಲಿ ಪುಷ್ಪಗಿರಿ ವೇರ್‌ಹೌಸ್‌ನ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂದು ದೂರಿದರು.
ಜಿಲ್ಲೆಯ ಸಂಸದ ಮಾರ್ಗದರ್ಶನದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಭದ್ರತೆಗಾಗಿ 500 ಪೊಲೀಸ್ ಸಿಬ್ಬಂದಿ, 10 ಪೊಲೀಸ್ ಅಧಿಕಾರಿಗಳನ್ನು ನಿಯೋಜನೆ ಮಾಡಿಕೊಂಡು ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಂಸದರ ಬೆಂಬಲದಿಂದಲೇ ಇಷ್ಟೇಲ್ಲ ನಡೆದಿದೆ. 2013ರಿಂದ ಇಲ್ಲಿಯವರೆಗೆ ಸ್ಥಳೀಯರು ಹೋರಾಟ ಮಾಡಿಕೊಂಡು ಪಾರ್ಕ್ ಜಾಗ ಉಳಿಸಿಕೊಂಡು ಬಂದಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ತಮಗೆ ಬೇಕಾದವರಿಗೆ ಮಂಜೂರು ಮಾಡಲಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಕೋರ್ಟ್ ಆದೇಶ ಮೀರಿ, 500 ಪೊಲೀಸ್ ಸಿಬ್ಬಂದಿ ಭದ್ರತೆಯಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದನ್ನು ನೋಡಿರುವುದು. ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಈ ಪ್ರಕರಣವೇ ಉದಾಹರಣೆಯಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡು ಪಾರ್ಕ್ ಜಾಗ ಉಳಿಸಬೇಕೆಂದು ಒತ್ತಾಯಿಸಿದರು.
ಇದರ ಭಾಗವಾಗಿ ಹಾಸನ ತಾಲೂಕಿನ ಚಿಕ್ಕಕೊಂಡಗೂಳ ಗ್ರಾಮದ ಸರ್ವೆ ನಂ.7, 10, 25, 106, 107 ಮತ್ತು 137ಕ್ಕೆ ಸಂಬಂಧಿಸಿದಂತೆ ಹಂಗಾಮಿ ಸಾಗುವಳಿ ಚೀಟಿ ನೀಡಿರುವ ಮೂಲ ಮಂಜೂರು ಕಡತ ಲಭ್ಯವಿಲ್ಲದಿದ್ದರೂ ಕಾನೂನು ಬಾಹಿರವಾಗಿ ಖಾಯಂ ಸಾಗುವಳಿ ನೀಡಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ನಡೆದಿರುವ ಲೋಪವನ್ನು ಪರಿಶೀಲಿಸಿ ಮಂಜೂರಾತಿ ರದ್ದುಪಡಿಸಿ, ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳುವ ಅವಶ್ಯಕತೆ ಇದೆ ಎಂದು ಪರಿಶೀಲನೆಗೆ ತಂಡವನ್ನು ರಚಿಸಲಾಗಿದೆ ಎಂದು ದೂರಿದರು.
ಇದರಿಂದ ಈಗಾಗಲೇ ಸಾಗುವಳಿಯಲ್ಲಿರುವ ರೈತರ 70 ರಿಂದ 100 ಎಕರೆಯಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ದುರುಪಯೋಗ ಪಡಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕೆ ಬಳಕೆ ಮಾಡಲಿಕೊಳ್ಳಲು ಸಂಚು ರೂಪಿಸಿದಂತೆ ಕಾಣುತ್ತಿದೆ. ಈ ಬಗ್ಗೆಯೂ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕೆಂದು ಒತ್ತಾಯಿಸಿದರು.