

ಚಿತ್ತಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸುಳ್ಳು ಆರೋಪ ಮಾಡಿ ಪೋಸ್ಟ್ ಹಾಕಿದ ಆರೋಪದಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರನ್ನು ಮಾಡಬೂಳ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿ, ಬಿಡುಗಡೆಗೊಳಿಸಿದರು.
ಕಲಗುರ್ತಿ ಗ್ರಾಮದ ವ್ಯಕ್ತಿ ಕೊರಬಾ ಸಾವಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರೇ ಕಾರಣ. ಹೀಗಾಗಿ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಿಲ್ಲ ಎಂಬರ್ಥದಲ್ಲಿ ಮಣಿಕಂಠ ರಾಠೋಡ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಚೋದನೆ ನೀಡಿದ್ದಾರೆ ಎಂದು ಮಾಡಬೂಳ ಠಾಣೆಯಲ್ಲಿ ಮಣಿಕಂಠ ವಿರುದ್ಧ ಪ್ರಕರಣ ದಾಖಲಾಗಿತ್ತು. ಬುಧವಾರ ಬೆಳಗ್ಗೆಯೇ ಪೊಲೀಸರು ಕಲಬುರಗಿಗೆ ತೆರಳಿ ಮನೆಯಲ್ಲಿದ್ದ ಮಣಿಕಂಠ ಅವರನ್ನು ಬಂಧಿಸಿ, ಠಾಣೆಗೆ ಕರೆತಂದಿದ್ದಾರೆ.
ಬೆಂಬಲಿಗರು, ಕಾರ್ಯಕರ್ತರಿಂದ ಪ್ರತಿಭಟನೆ: ಮಣಿಕಂಠ ರಾಠೋಡ್ ಅವರ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮಾಡಬೂಳ ಠಾಣೆಗೆ ಆಗಮಿಸಿ, ಬಿಡುಗಡೆಗೆ ಒತ್ತಾಯಿಸಿದರು. ಕೆಲ ಕಾಲ ಠಾಣೆಯ ಮುಂಭಾಗದಲ್ಲಿ ಮುಖ್ಯರಸ್ತೆಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸಂಚಾರಕ್ಕೆ ತೊಂದರೆ ಉಂಟಾಯಿತು. ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ್, ಪ್ರಮುಖರಾದ ಶಂಕರ ಚವ್ಹಾಣ್, ವೀರಣ್ಣ ಯಾರಿ, ಗುಂಡು ಮತ್ತಿಮಡು, ಅಯ್ಯಪ್ಪ ಪವಾರ್, ರಾಜು ದೊರೆ, ಶ್ರೀಕಾಂತ ಸುಲೇಗಾಂವ್, ಸೋಮು ಐನಾಪುರ ಇತರರಿದ್ದರು. ಕಾಳಗಿ ಸಿಪಿಐ ವಿನಾಯಕ, ಪಿಎಸ್‌ಐ ಶ್ರೀಶೈಲ್ ಅಂಬಾಟಿ ಹಾಗೂ ಸಿಬ್ಬಂದಿ ಬಂದೋಬಸ್ತ್ ಕಲ್ಪಿಸಿದ್ದರು.