

ಹಾಸನ : ಎಚ್‌ಡಿ ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.4 ಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ ಶೇ.2ರಂತೆ ಹಂಚಿಕೆ ಮಾಡಿ ಬಿಜೆಪಿ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಸಮುದಾಯಗಳ ನಡುವೆ ಕಿಚ್ಚು ಹಚ್ಚಿ ತಮ್ಮ ಬೇಳೆ ಬೆಯಿಸಿಕೊಳ್ಳಲು ಬಿಜೆಪಿ ಈ ಗಿಮಿಕ್ ಮಾಡಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು.
ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸವನ್ನು ಬಿಜೆಪಿ ಮಾಡಿದರೆ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಇಷ್ಟು ವರ್ಷ ಅಧಿಕಾರದಲ್ಲಿ ಇದ್ದಾಗ ಮಾಡದ ಕೆಲಸವನ್ನು ಇದೀಗ ಮಾಡಲು ಹೊರಟಿದೆ. ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.4 ಮೀಸಲಾತಿ ತೆಗೆಯುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಯಾವ ರಾಷ್ಟ್ರೀಯ ಪಕ್ಷಗಳು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಿಲ್ಲ. 50 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಕೂಡ ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಿಲ್ಲ. ಅವರಿಗೆ ಮೀಸಲಾತಿ ನೀಡಲು ಎಚ್.ಡಿ. ದೇವೇಗೌಡರೇ ಬರಬೇಕಾಯಿತು. ದೇವೇಗೌಡರು ಎಲ್ಲ ಸಮುದಾಯದವರನ್ನು ಒಟ್ಟಿಗೆ ಕೊಂಡೊಯ್ಯಬೇಕು ಎಂಬ ಹಿತಾಸಕ್ತಿಯಿಂದ ಈ ಕೆಲಸ ಮಾಡಿದ್ದರು. ಆದರೆ, ಈಗ ಬಿಜೆಪಿ ಸಮಾಜದಲ್ಲಿ ಶಾಂತಿ ಕದಡಿ, ಮತ ಪಡೆಯುವ ಉದ್ದೇಶದಿಂದ ಮೀಸಲಾತಿ ಜೇನುಗೂಡಿಗೆ ಕಲ್ಲು ಹೊಡೆಯಲು ಮುಂದಾಗಿದೆ ಎಂದು ಹೇಳಿದರು.
ಇದೊಂದು ಜಾಹೀರಾತು ಸರ್ಕಾರ. ಬೋಗಸ್ ಆಶ್ವಾಸನೆಗಳನ್ನು ನೀಡುತ್ತಾ ಜನರನ್ನು ವಂಚಿಸುವ ಕೆಲಸ ಮಾಡುತ್ತಿದೆ. ದುಡ್ಡು ಇಲ್ಲದೇ ನಿಗಮಗಳನ್ನು ಸ್ಥಾಪನೆ ಮಾಡುತ್ತಿದೆ. 25 ನಿಗಮಗಳಲ್ಲಿ ಅದರ ಅಧ್ಯಕ್ಷರು ಓಡಾಡುವ ಕಾರಿಗೆ ಪೆಟ್ರೋಲ್ ಹಾಕಿಸಲು ಸಹ ಹಣ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ರಾಹುಲ್ ಗಾಂಧಿ ಅನರ್ಹತೆ ಖಂಡನೀಯ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಕೋರ್ಟ್ ಶಿಕ್ಷೆ ನೀಡಿದ ದಿನವೇ ಸಂಸದ ಸ್ಥಾನವನ್ನು ಅನರ್ಹಗೊಳಿಸಿರುವ ನಡೆ ತೀರಾ ಖಂಡನೀಯ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಲಕ್ಷಣ. ಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶವಿದೆ. ಆದರೂ ಏಕಾಏಕಿ ಹೀಗೆ ಅನರ್ಹಗೊಳಿಸಿರುವ ನಡೆ ಆಕ್ಷೇಪಾರ್ಹ. ಇದು ಮುಂದಿನ ದಿನಗಳಲ್ಲಿ ತಿರುಗುಬಾಣವಾಗಲಿದೆ. ಇಷ್ಟೊಂದು ದ್ವೇಷ ರಾಜಕೀಯ ಮಾಡುವ ಅಗತ್ಯವಾದರೂ ಏನಿದೆ. ಹಾಗಾದರೆ ಗಾಂಧಿ ಕುಟುಂಬ ಈ ದೇಶಕ್ಕೆ ಏನು ತ್ಯಾಗವನ್ನೇ ಮಾಡಿಲ್ಲವೇ? ಎಂದು ಎಚ್.ಡಿ. ರೇವಣ್ಣ ಅವರು ಪ್ರಶ್ನೆ ಮಾಡಿದರು.
ಇಂದು ಮೈಸೂರಿನಲ್ಲಿ ಜೆಡಿಎಸ್ ಸಮಾವೇಶ
ಕುಮಾರಣ್ಣ ಅವರು 90 ದಿನಗಳ ಕಾಲ ಬಿಸಿಲು- ಚಳಿ ಲೆಕ್ಕಿಸದೆ 95 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪಂಚರತ್ನ ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಭಾನುವಾರ ಬೆಳಗ್ಗೆ ಮೈಸೂರಿನಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಎಚ್.ಡಿ. ದೇವೇಗೌಡರ ಉಪಸ್ಥಿತಿಯಲ್ಲಿ ನಡೆಯುವ ಈ ಸಮಾವೇಶದಲ್ಲಿ 8ರಿಂದ 10 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಹಾಸನದಿಂದ ಸುಮಾರು 1 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಎಚ್.ಡಿ. ರೇವಣ್ಣ ಹೇಳಿದರು.
ಬಡ ಕುಟುಂಬಗಳ ನೋವು ಆಲಿಸಲು ಸ್ವತಃ ಕುಮಾರಣ್ಣ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಅವರ ಕಷ್ಟಗಳನ್ನು ಕೇಳಿದ್ದಾರೆ ಕಣ್ಣಾರೆ ಕಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ 123 ಸ್ಥಾನಗಳನ್ನು ನೀಡಿ ಸರ್ಕಾರ ರಚನೆಗೆ ಜನರು ಅವಕಾಶ ಮಾಡಿಕೊಟ್ಟರೆ ಪಂಚರತ್ನ ಯೋಜನೆಯ ಗುರಿಗಳಾದ ಉಚಿತ ಶಿಕ್ಷಣ, ಉಚಿತ ಆರೋಗ್ಯ, ನೀರಾವರಿ, ಯುವ ಸಮುದಾಯಕ್ಕೆ ಉದ್ಯೋಗ, ರೈತರ ಸಮಸ್ಯೆ ಹಾಗೂ ನೀರಾವರಿ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಹಾಗೂ ಮುಖಂಡ ಕೆ.ಎಂ. ರಾಜೇಗೌಡ ಅವರು ಇದ್ದರು.