ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ

13
Published on

ಮೈಸೂರು: ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಗೃಹದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಪಂಚಾಯಿತಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.


ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿ ಗ್ರೂಪ್‌ಗಳಿಗೆ ಕಳುಹಿಸಿರುವುದು ಬೆಳಕಿಗೆ ಬಂದಿದೆ. ಜು.19ರಂದು ಇದು ನಡೆದಿದೆ. ಆದರೆ, ಕಾನೂನು ಕ್ರಮ ತೆಗೆದುಕೊಂಡಿಲ್ಲ. ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾದ ಬಳಿಕ ಪ್ರಕರಣ ದಾಖಲಾಗಿದೆ. ಆರೋಪಿ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಕೂಡಲೇ ಈ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.


ಈ ಅಪರಾಧ ಪ್ರಕರಣದ ಹಿಂದಿರುವ ಸಂಘಟನೆಯನ್ನು ಪತ್ತೆ ಹಚ್ಚಬೇಕು. ಸಂತ್ರಸ್ತ ಹೆಣ್ಣು ಮಕ್ಕಳು ಮತ್ತು ಅವರ ಕುಟುಂಬದ ಸದಸ್ಯರಿಗೆ ರಕ್ಷಣೆ ಕೊಡಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.


ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ಉಪಮೇಯರ್ ಡಾ.ರೂಪಾ, ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ವೇದಾವತಿ, ಛಾಯಾ, ಶಾಂತಮ್ಮ, ಶಾರದಮ್ಮ, ಮುಖಂಡರಾದ ಎಂ.ಜಿ.ಗಿರಿಧರ್, ವಾಣಿಶ್ ಕುಮಾರ್, ರೇಣುಕಾ ರಾಜ್, ನಾಗರತ್ನ ಗೌಡ, ಗೋಪಾಲ್ ರಾಜ್ ಅರಸ್, ಚಿಕ್ಕಮ್ಮ ಬಸವರಾಜು ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net