

ಆಲೂರು: ತಾಲೂಕಿನ ಕುಂದೂರು ಗ್ರಾಮ ಪಂಚಾಯಿತಿ ಮೇರ್ವೆ (ವಳಗರವಳ್ಳಿ) ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಂತಿ ಗೆಲುವು ಸಾಧಿಸಿದ್ದಾರೆ.
ಪರಿಶಿಷ್ಟ ಮಹಿಳೆಗೆ ಮೀಸಲಾಗಿರುವ ಈ ಕ್ಷೇತ್ರದಿಂದ ಎರಡೂವರೆ ವರ್ಷದ ಹಿಂದೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹಂಸವೇಣಿ ಆಯ್ಕೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಅವರು ರಾಜೀನಾಮೆ ನೀಡದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಜು. 23ರಂದು ಉಪ ಚುನಾವಣೆ ನಡೆದಿತ್ತು.
ಬುಧವಾರ ತಾಲೂಕು ಕಚೇರಿಯಲ್ಲಿ ಮತ ಎಣಿಕೆ ನಡೆದು ಜಯಂತಿ 208 ಮತ ಪಡೆದು ಜಯಗಳಿಸಿದರೆ, ಅವರ ಎದುರಾಳಿ ಗೀತಾ 107 ಮತ ಪಡೆದು ಸೋಲು ಅನುಭವಿಸಿದರು.
ನೂತನ ಸದಸ್ಯೆ ಜಯಂತಿ ಅವರನ್ನು ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಕಾಸ್, ಬಿಜೆಪಿ ಮುಖಂಡ ಗಣೇಶ್, ನಂಜುಂಡಪ್ಪ, ರವಿಕುಮಾರ್ ಇತರರು ಅಭಿನಂದಿಸಿದರು.
ಅಧ್ಯಕ್ಷರಾಗುವ ಅವಕಾಶ: ಆ.3 ರಂದು ಕುಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಪರಿಶಿಷ್ಟ ಮಹಿಳೆಯಾಗಿ ಜಯಂತಿ ಒಬ್ಬರೇ ಆಯ್ಕೆಯಾಗಿರುವುದರಿಂದ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಅವಕಾಶ ಇದೆ.