

ಸಕಲೇಶಪುರ: ಭಾರತೀಯ ಜನತಾ ಪಕ್ಷದ ರಾಜ್ಯ ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಸುಶೀಲಾ ಶಿವಪ್ಪ (90) ಅವರು ತಾಲೂಕು ಯಸಳೂರು ಹೋಬಳಿ ಕುಂಬರಹಳ್ಳಿ ಗ್ರಾಮದ ತಮ್ಮ ಸ್ವಗೃಹದಲ್ಲಿ ಸೋಮವಾರ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ಮಧ್ಯಾಹ್ನ 1.45 ರಲ್ಲಿ ಇಹಲೋಕ ತ್ಯಜಿಸಿದರು. ರಾಜ್ಯ ಬಿಜೆಪಿ ಹಿರಿಯ ನಾಯಕರಲ್ಲೊಬ್ಬರಾಗಿದ್ದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ, ಮಾಜಿ ಶಾಸಕ ದಿವಂಗತ ಬಿ.ಬಿ. ಶಿವಪ್ಪ ಅವರ ಪತ್ನಿ ಆಗಿದ್ದ ಸುಶೀಲಾ ಅವರು 1984 ರಿಂದ 1988 ರವರೆಗೆ ಸತತ ಎರಡು ಅವಧಿಗೆ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯಾದ್ಯಂತ ತನ್ನ ಪತಿ ಬಿ.ಬಿ. ಶಿವಪ್ಪ ಅವರೊಂದಿಗೆ ಸಂಚಾರ ನಡೆಸಿ ಪಕ್ಷ ಸಂಘಟಿಸಿದ್ದರು.
ರಾಜಕಾರಣಿ ಕುಟುಂಬದ ಹೆಣ್ಣು ಮಗಳಾದ ಸುಶೀಲಾ ಅವರು ತಮ್ಮ ಪತಿಯೊಂದಿಗೆ ಸಹಜವಾಗಿ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಸುಶೀಲಾ ಅವರ ತಂದೆ ಕೆ. ಮಲ್ಲಪ್ಪ ಹಿಂದಿನ ಕೊಡಗು ರಾಜ್ಯದ ಗೃಹ ಮಂತ್ರಿ ಆಗಿದ್ದರು. ಕೊಡಗು ಮೈಸೂರು ರಾಜ್ಯದಲ್ಲಿ ವಿಲೀನಗೊಂಡ ನಂತರ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಪ್ರದರ್ಶನದ ಉದ್ದೇಶದಿಂದ 1996 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸುಮಾರು ಮೂರು ಲಕ್ಷ ಮತ ಪಡೆದಿದ್ದರು. ಬಿಜೆಪಿ ರಾಷ್ಟ್ರೀಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಆಡ್ವಾನಿ ಅವರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಈ ಇಬ್ಬರು ರಾಷ್ಟ್ರೀಯ ನಾಯಕರು ಸುಶೀಲಾ ಶಿವಪ್ಪ ಅವರ ಮನೆಗೆ ಭೇಟಿ ಸಹ ನೀಡಿದ್ದರು.
ಇಂದು ರಾಜ್ಯ ಬಿಜೆಪಿಯಲ್ಲಿ ಪ್ರಬಲ ಸ್ಥಾನ ಪಡೆದಿರುವ ಹಲವು ರಾಜಕೀಯ ನಾಯಕರು ಇವರ ಗರಡಿಯಲ್ಲಿ ಬೆಳೆದವರಾಗಿದ್ದಾರೆ. ಎರಡು ಬಾರಿ ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ತಮ್ಮ ಪತಿ ಬಿ.ಬಿ. ಶಿವಪ್ಪ ಅವರು 2001 ರಲ್ಲಿ ಬಿಜೆಪಿ ತೊರೆದಾಗಲೂ ತಾವು ಮಾತ್ರ ಬಿಜೆಪಿಯಲ್ಲೇ ಉಳಿಯುವ ಮೂಲಕ ಪಕ್ಷ ನಿಷ್ಠೆ ಮೆರೆದಿದ್ದರು. 2017 ರಲ್ಲಿ ಪತಿ ಬಿ.ಬಿ. ಶಿವಪ್ಪ ಅವರು ನಿಧನರಾದ ನಂತರ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದು ಮನೆಯಲ್ಲೇ ಇದ್ದರು.
ಕಳೆದ ಒಂದು ತಿಂಗಳ ಹಿಂದೆ ಸುಶೀಲಾ ಅವರ ಆರೋಗ್ಯ ಬಿಗಡಾಯಿಸಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ , ಸಂಸದ ಸದಾನಂದ ಗೌಡ ಸೇರಿದಂತೆ ಹಲವು ನಾಯಕರು ಕುಂಬರಹಳ್ಳಿಗೆ ಆಗಮಿಸಿ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದರು.
ಮೃತರು ಪ್ರತಾಪ್, ಪ್ರದೀಪ್ ಮತ್ತು ಸುದೀರ್ ಎಂಬ ಮೂವರು ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಕುಂಬರಹಳ್ಳಿ ಎಸ್ಟೇಟ್‌ನಲ್ಲಿ ಮಂಗಳವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೇಂದ್ರ ಸಚಿವೆ ಭೇಟಿ:
ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಮಂಗಳವಾರ ಬೆಳಗ್ಗೆ 10.30 ಕ್ಕೆ ಆಗಮಿಸಿ ಅಗಲಿದ ನಾಯಕಿಯ ಅಂತಿಮ ದರ್ಶನ ಪಡೆಯಲಿದ್ದಾರೆ.
ಸಂತಾಪ:
ಸುಶೀಲಾ ಶಿವಪ್ಪ ಸುಶೀಲಾ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸುಶೀಲಕ್ಕ ಅವರು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಾಗೂ ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದವರು. ಅವರ ಸಂಘಟನೆಯ ದಾರಿಯು ನಮಗೆಲ್ಲಾ ಪ್ರೇರಣೆಯಾಗಿದೆ ಎಂದು ಸ್ಮರಿಸಿದ್ದಾರೆ.
ಸುಶೀಲಾ ಶಿವಪ್ಪ ಅವರ ನಿಧನಕ್ಕೆ ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾ ಹಾಸನ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.