ಬಿಜೆಪಿ ಪಕ್ಷಕ್ಕೆ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ; ಸಿದ್ದರಾಮಯ್ಯ

ಬಿಜೆಪಿ ಪಕ್ಷಕ್ಕೆ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ; ಸಿದ್ದರಾಮಯ್ಯ
Published on

ಅರಸೀಕೆರೆ : ನಿರಾವರಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು. ತಾಲೂಕಿನ ಗಂಡಸಿ ಹೋಬಳಿ ಗೊಲ್ಲರಹಳ್ಳಿ ಗ್ರಾಮದಲ್ಲಿ ಜಿಪಂ ಮಾಜಿ ಸದಸ್ಯ ಪಟೇಲ್ ಶಿವಪ್ಪ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಭಾನುವಾರ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 2018ರ ಚುನವಣಾ ಪ್ರಣಾಳಿಕೆಯಲ್ಲಿ ಬಿಜೆಪಿ 1.40 ಲಕ್ಷ ಕೋಟಿ ರೂ.ವೆಚ್ಚದಲ್ಲಿ ಕಾವೇರಿ, ಕೃಷ್ಣಾ, ಎತ್ತಿನ ಹೊಳೆ ಸೇರಿ ರಾಜ್ಯದ ಎಲ್ಲ ನಿರಾವರಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ ಕೇವಲ 40 ಸಾವಿರ ಕೋಟಿ ರೂ.ವೆಚ್ಚ ಮಾಡುವ ಮೂಲಕ ಜನರ ನಿರೀಕ್ಷೆ ಹುಸಿಗೊಳಿಸಿದೆ. ಸುಳ್ಳು ಹೇಳಿ ಅಧಿಕಾರ ನಡೆಸುತ್ತಿರುವುದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸಾಧನೆಯಾಗಿದೆ. ರಾಜ್ಯದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪದಿಂದ ಮನೆ, ಮಠ ಮುರಿದು ಬಿದ್ದಿರುವುದು ಸೇರಿ ಅಂದಾಜು 5 ಲಕ್ಷ ಕೋಟಿ ರೂ.ಹಾನಿ ಸಂಭವಿಸಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ವಾಸ್ತವ ಮನಗಂಡು ತಕ್ಷಣವೇ ಪರಿಹಾರ ವಿತರಿಸುವ ಮೂಲಕ ನೆರವಿಗೆ ಧಾವಿಸಬೇಕು.ಇಲ್ಲದಿದ್ದಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ನಡೆಯಲಿದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು ಏಪ್ರಿಲ್-ಮೇ ತಿಂಗಳಿನಲ್ಲಿ ಪ್ರಕ್ರಿಯೆ ನಡೆಯಲಿದೆ. ಮಾಜಿ ಸಂಸದ ಮುದ್ದಹನುಮೇಗೌಡ ಸೇರಿ ಯಾರೇ ಪಕ್ಷ ತೊರೆದರೂ ಅಡ್ಡಿಯಿಲ್ಲ.ಹಳೆ ಮೈಸೂರು ಭಾಗದ ಹಲವು ಶಾಸಕರು ಕಾಂಗ್ರೆಸ್ ಸೇರುವ ತವಕದಲ್ಲಿದ್ದು ತತ್ವ, ಸಿದ್ದಾಂತ ಒಪ್ಪಿ ಬರುವವರಿಗೆ ಬಾಗಿಲು ತೆರೆದಿರುತ್ತದೆ.ರಾಜಕೀಯ ಧ್ರುವೀಕರಣದ ಬಗ್ಗೆ ಕೆಲ ತಿಂಗಳ ನಂತರ ಪ್ರತಿಕ್ರಿಯಿಸುತ್ತೇನೆ ಕಾದು ನೋಡಿ ಎಂದು ಮಾರ್ಮಿಕ ಉತ್ತರ ನೀಡಿದರು.

ಗಣೇಶೋತ್ಸವ ಆಚರಣೆಗೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಸಾರ್ವರ್ಕರ್ ವಿಷಯ ಮುಂದಿಟ್ಟು ಧಾರ್ಮಿಕ ಆಚರಣೆಯನ್ನು ಕಲುಷಿತಗೊಳಿಸಲಾಗುತ್ತಿದೆ.ಬಿಜೆಪಿಗರು ಬುದ್ದ, ಬಸವಣ್ಣ, ಕನಕದಾಸರು ಸೇರಿ ಯಾರನ್ನೂ ಬಿಟ್ಟಿಲ್ಲ. ಪಠ್ಯ ತಿರುಚಿರುವುದೇ ಇದಕ್ಕೆ ನಿದರ್ಶನವಾಗಿದೆ ಎಂದು ತಿರುಗೇಟು ನೀಡಿದರು.

ಭ್ರಷ್ಟೋತ್ಸವ- ಅಭಿವೃದ್ಧಿ ಕಾಮಗಾರಿಗಳಲ್ಲಿ ಶೇ.40 ಪರ್ಸೆಂಟ್ ಕಮೀಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದೂರಿದ್ದಾರೆ. ಪಿಎಸ್‌ಐ, ಕೆಪಿಟಿಸಿಎಲ್ ಸೇರಿ ಹಲವು ನೇಮಕಗಳಲ್ಲಿ ಭಾರಿ ಅಕ್ರಮ ನಡೆದಿರುವುದು ಬಯಲಾಗಿದೆ. ಬಿಜೆಪಿಯವರು ನಡೆಸುತ್ತಿರುವುದು ಜನೋತ್ಸವವವಲ್ಲ ಭ್ರಷ್ಟೋತ್ಸವ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ಮಾಜಿ ಸಚಿವ ಬಿ.ಶಿವರಾಮು, ಜಿಪಂ ಮಾಜಿ ಸದಸ್ಯ ಪಟೇಲ್ ಶಿವಪ್ಪ, ಮುಖಂಡರಾದ ಜತ್ತೇನಹಳ್ಳಿ ರಾಮಚಂದ್ರು, ಬಿ.ಜಿ.ನಿರಂಜನ್, ಜಿಟಿಎಸ್ ಗೌಸ್‌ಖಾನ್ ಸೇರಿ ಇನ್ನಿತರರು ಹಾಜರಿದ್ದರು.

ನಾಲಾಯಕ್-ರಾಜಕಾಲುವೆ ಒತ್ತುವರಿ ವಿಷಯದಲ್ಲಿ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಅಕ್ಷಮ್ಯ.ಲೋಪವಿದ್ದಲ್ಲಿ ಕುಳಿತು ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸಬಹುದಿತ್ತು. ಅದನ್ನು ಬಿಟ್ಟು ಸಾರ್ವಜನಿಕವಾಗಿ ರೇಪ್ ಮಾಡಿದ್ದೇನೆಯೇ ಎಂದು ಪ್ರಶ್ನಿಸಿರುವುದು ಮೂರ್ಖತನದ ಪರಮಾವಧಿಯಾಗಿದೆ. ಇಂಥ ವಕ್ತಿಗಳು ಶಾಸನ ಸಭೆ ಪ್ರವೇಶಿಸಲು ನಾಲಾಯಕ್ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net