

ಮೈಸೂರು: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ನಗರದ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಬೀದರ್‌ನಲ್ಲಿ ನಡೆದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಎಂಎಲ್‌ಸಿಗಳಾದ ಸಿ.ಟಿ.ರವಿ, ರವಿಕುಮಾರ್ ಸೇರಿದಂತೆ ವಿವಿಧ ಮುಖಂಡರು ಖರ್ಗೆ ವಿರುದ್ಧ ಟೀಕೆ ಮಾಡುತ್ತಿದ್ದು, ಸಚಿನ್ ಪಾಂಚಾಳ್ ಮನೆಗೆ ಸಾಂತ್ವನ ಹೇಳುವ ನೆಪದಲ್ಲಿ ಹೋಗಿ ಪ್ರಕರಣದ ಪೂರ್ವಾಪರ ಅವಲೋಕಿಸದೆ, ರಾಜಕೀಯ ಲಾಭಕ್ಕಾಗಿ ಮನಬಂದಂತೆ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ ಎಂದು ಕಿಡಿಕಾರಿದರು.
ಸಚಿನ್ ಪಾಂಚಾಳ್ ಬರೆದಿರುವ ಡೆತ್‌ನೋಟ್‌ನಲ್ಲಿ ರಾಜು ಕಪ್ಪನೂರ ಹಾಗೂ ಅವರ ಸೋದರ ಸಂಬಂಧಿಗಳ ಹೆಸರು ಮಾತ್ರ ಉಲ್ಲೇಖವಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಆದರೆ, ಬಿಜೆಪಿ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಕಾಣಿಸಿಕೊಂಡಿರುವ ರಾಜು ಕಪ್ಪನೂರ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಅವಧಿಯಲ್ಲಿ ನಡೆದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನೇಕ ಹಗರಣ ಹೊರತಂದಿರುವ ಪ್ರಿಯಾಂಕ್ ಖರ್ಗೆ ಏಳಿಗೆ ಸಹಿಸುತ್ತಿಲ್ಲ. ಹೀಗಾಗಿ, ಬಿಜೆಪಿ ದಲಿತ ವಿರೋಧಿ ನಾಯಕರು ಅನಗತ್ಯವಾಗಿ ಅವರ ಹೆಸರನ್ನು ಎಳೆದು ತಂದಿದ್ದು, ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.
ಅನಗತ್ಯವಾಗಿ ದಲಿತರನ್ನು ಗುರಿಯಾಗಿಸಿಕೊಂಡು ಸುಳ್ಳು ಆರೋಪ ಮಾಡಿ, ಗೊಂದಲ ಸೃಷ್ಟಿಸಿ ಸಮಾಜದಲ್ಲಿ ಅಶಾಂತಿಯನ್ನು ಬಿಜೆಪಿ ಉಂಟು ಮಾಡುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸದಿದ್ದಲ್ಲಿ ಬಿಜೆಪಿ ನಾಯಕರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಖಿಲ ಕರ್ನಾಟಕ ಮಲ್ಲಿಕಾರ್ಜುನ್ ಖರ್ಗೆ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿ.ನರೇಂದ್ರ, ಡಿಎಸ್‌ಎಸ್ ಸಂಚಾಲಕ ಬಿಳಿಕೆರೆ ಸ್ವಾಮಿ, ಮುಖಂಡರಾದ ಹಿನಕಲ್ ಮಂಜು, ಬಂಡಿಪಾಳ್ಯ ವಿಜಯಕುಮಾರ್, ಭಾಸ್ಕರ್, ರಘು, ಶಿವರಾಜ್ ಕ್ಯಾತನಹಳ್ಳಿ, ಕನಕಮೂರ್ತಿ, ಧನಗಳ್ಳಿ ಪ್ರವೀಣ್, ನಾಗರಾಜ್ ಇನ್ನಿತರರಿದ್ದರು.