ಬಿಜೆಪಿ ದಲಿತ ವಿರೋಧಿ ಅಲ್ಲ, ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸ್ಪಷ್ಟನೆ

22 hsk manjunath photo 2
Published on

ಹೊಸಕೋಟೆ: ಬಿಜೆಪಿಯಲ್ಲಿ ದಲಿತರು ಕಾರ್ಯಕರ್ತರಾಗಿ ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ದಲಿತ ವಿರೋಧಿಯಾಗಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ನಗರದ ಕನಕ ಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಎಸ್‌ಸಿ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ಬಂದ ದಿನಗಳಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೇ ಕಾಂಗ್ರೆಸ್. ದಲಿತರಿಗೆ ಪಕ್ಷದಲ್ಲಿ, ಆಡಳಿತದಲ್ಲಿ ಸರಿಯಾದ ಸ್ಥಾನಮಾನ ಕೊಡದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿಯನ್ನು ದಲಿತ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 2ನೇ ಅವಧಿಯಲ್ಲೇ ಬಿಜೆಪಿ ಒಬ್ಬ ದಲಿತ ಉಪಮುಖ್ಯಮಂತ್ರಿಯನ್ನು ರಾಜ್ಯಕ್ಕೆ ನೀಡಿದೆ. ಕಾಂಗ್ರೆಸ್‌ನಲ್ಲಿ ಅದಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ. ಬಿಜೆಪಿ ದಲಿತ ಅಥವಾ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಬದಲಿಗೆ ದೇಶದ ಹಿತಾಸಕ್ತಿಗಳಿಗೆ ಯಾರು ವಿರೋಧ ವ್ಯಕ್ತಪಡಿಸುತ್ತಾರೋ ಅಂಥವರ ವಿರೋಧಿ ಎಂದು ಸ್ಪಷ್ಟಪಡಿಸಿದರು.

ವ್ಯಕ್ತಿ ಕೇಂದ್ರಿತ ಪಕ್ಷವಲ್ಲ: ಬಿಜೆಪಿಯು ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನಮಾನ ಕೊಡುತ್ತದೆ. ಅದು ವ್ಯಕ್ತಿ ಕೇಂದ್ರಿತ ಪಕ್ಷವಲ್ಲ. ಬದಲು ತತ್ವ ಕೇಂದ್ರಿತವಾದ ಪಕ್ಷ. ಇಷ್ಟು ದಿನ ಕಾಂಗ್ರೆಸ್ ದಲಿತರನ್ನು ಮತಬ್ಯಾಂಕ್ ಆಗಿ ಮಾಡಿಕೊಂಡು, ಅಧಿಕಾರಕ್ಕೆ ಬರುತ್ತಿತ್ತು. ಆದರೆ ಈಗ ಶೇ.70 ದಲಿತರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಜಾತ್ಯಾತೀತ ತತ್ವನ್ನು ಕಾಂಗ್ರೆಸ್ ಪಾಲಿಸಲಿ: ಬೇರೆಯವರಿಗೆ ಜಾತ್ಯಾತೀತೆ ಬಗ್ಗೆ ಪಾಠ ಹೇಳಿಕೊಡುವ ಮೊದಲು ಅದನ್ನು ಕಾಂಗ್ರೆಸ್ ಮೊದಲು ರೂಢಿಸಿಕೊಳ್ಳಲಿ. ರಾಜ್ಯದ ಮುಖ್ಯಮಂತ್ರಿ ಸ್ಥಾನದ ಬದಲಾವಣೆಯ ಊಹಾಪೋಹಗಳು ಪ್ರಾರಂಭವಾಗಿದೆ. ಇದಾಗುತ್ತಲೇ ಕಾಂಗ್ರೆಸ್‌ನಲ್ಲಿರುವ ಲಿಂಗಾಯತರು ಬಿ.ಎಸ್. ಯಡಿಯೂರಪ್ಪ ಅವರ ಪರ ಮಾತನಾಡಲಾರಂಭಿಸಿದ್ದಾರೆ. ಇದು ಜಾತ್ಯಾತೀತ ಪಕ್ಷವು ನಡೆದುಕೊಳ್ಳುವ ರೀತಿಯೇ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಪ್ರಶ್ನಿಸಿದರು.

ಕಾಂಗ್ರೆಸ್ ಮಧ್ಯಪ್ರವೇಶದ ಅವಶ್ಯಕತೆ ಇಲ್ಲ: ಮುಖ್ಯಮಂತ್ರಿಯ ಬದಲಾವಣೆ ವಿಚಾರ ಬಿಜೆಪಿಯ ಆಂತರಿಕ ವಿಷಯವಾಗಿದೆ. ಇದರಲ್ಲಿ

ಕಾಂಗ್ರೆಸ್ ಮಧ್ಯಪ್ರವೇಶಿಸುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದೆಷ್ಟೋ ಬಾರಿ ಮುಖ್ಯಮಂತ್ರಿಗಳನ್ನು ಏಕಾಏಕಿ ಬದಲಾಯಿಸುತ್ತಿತ್ತು. ಮುಖ್ಯಮಂತ್ರಿ ಆಗಿದ್ದವರು ಕಣ್ಣೀರಿಟ್ಟು ಸ್ಥಾನದಿಂದ ಕೆಳಗಿಳಿಯುತ್ತಿದ್ದರು. ಅಂಥ ಪಕ್ಷ ಈಗ ನಮಗೆ ಪಾಠ ಮಾಡಲು ಬರುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.

ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಅನಿಲ್, ವಿಭಾಗ ಸಂಘಟನಾ ಕಾರ್ಯದರ್ಶಿ ಕಾಂತರಾಜ್, ಮುಖಂಡರಾದ ಹನುಮಂತರಾವ್, ನಿತಿನ್, ಶ್ರೀನಿವಾಸ್, ಸೋಮಶೇಖರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net