ಬಿಜೆಪಿ ತೊರೆಯುವ ಮಾತೇ ಇಲ್ಲ, ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟನೆ, ಕಾಂಗ್ರೆಸ್ ನಾಯಕರ ವಿರುದ್ಧ ಗರಂ

mtb 1
Published on

ಬೆಂಗಳೂರು ಗ್ರಾಮಾಂತರ: ಭಾರತೀಯ ಜನತಾ ಪಕ್ಷವನ್ನು ತೊರೆಯುವ ಮಾತೇ ಇಲ್ಲ. ಪ್ರತಿ ಚುನಾವಣೆಗೆ ಒಂದೊಂದು ಪಕ್ಷ ಬದಲಿಸುವ ಜಾಯಮಾನ ನನ್ನದಲ್ಲ ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಸಚಿವ ಎಂಟಿಬಿ ನಾಗರಾಜ್ ಹೇಳಿದರು.

ಕಸಬಾ ಹೋಬಳಿಯ ಕುಂಬಳಹಳ್ಳಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಕರೊನಾ ಲಸಿಕೆ ಉಚಿತ ಅಭಿಯಾನದಲ್ಲಿ ಮಾತನಾಡಿದರು.

ಕಾಂಗ್ರೆಸ್ ತೊರೆದವರು ಮತ್ತೆ ಪಕ್ಷಕ್ಕೆ ಬರಲು ಅರ್ಜಿ ಹಾಕಬಹುದು ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿದ ಅವರು, ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕ ಅನುದಾನ ನೀಡಲಿಲ್ಲ. ಇದರಿಂದ ಕ್ಷೇತ್ರದ ಜನರಿಗೆ ಅನ್ಯಾಯವಾಗುತ್ತಿದೆ ಎಂಬ ಒಂದೇ ಕಾರಣಕ್ಕೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದಲೇ ಹೊರಬಂದಿದ್ದೇನೆ ಎಂದರು.

ಬಿಜೆಪಿಯಿಂದ ಸಚಿವನಾಗಿ ಸೇವೆ ಮಾಡುತ್ತಿದ್ದೇನೆ. ಯಾವುದೆ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ ಎಂದು ಪುನರುಚ್ಚರಿಸಿದರು.

ಅರ್ಜಿ ಹಾಕಲು ಯಾರೂ ಸಿದ್ಧರಿಲ್ಲ. ನಾನಂತೂ ಸಿದ್ಧನಿಲ್ಲ. ಯಾವುದೇ ಅಧಿಕಾರ, ಅಂತಸ್ತಿಗೆ ರಾಜಕೀಯಕ್ಕೆ ಬಂದಿಲ್ಲ. ಪಕ್ಷ ಯಾವುದೇ ಇರಲಿ ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮನೆಯಲ್ಲಿದ್ದರೂ ಜನಸೇವೆ ಮಾಡುತ್ತೇನೆ. ಎಂಟಿಬಿ ಚಾರಿಟಬಲ್ ಟ್ರಸ್ಟ್ ಇದೆ. ಆ ಮೂಲಕ ಜನಸೇವೆ ಮುಂದುವರಿಸುತ್ತೇನೆ ಎಂದರು.

40 ವರ್ಷ ಕಾಂಗ್ರೆಸ್‌ನಲ್ಲಿದ್ದೆ. ಬೇರೆಯವರ ರೀತಿ ಪಕ್ಷ ಬದಲಿಸಲ್ಲ. ನಾನು ಕ್ಷೇತ್ರದ ಸೇವೆ ಮಾಡುತ್ತಿರುವುದು ಗಿಮಿಕ್ ಅಲ್ಲ. ಚುನಾವಣೆ ಬಂದಾಗ ಜನರೇ ತೀರ್ಮಾನ ಮಾಡುತ್ತಾರೆ. ಅವರ ತೀರ್ಪಿಗೆ ತಲೆಬಾಗಬೇಕು ಎಂದರು.

ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಜನ ಕಂಗಾಲಾಗಿದ್ದಾರೆ. ಅವರಿಗೆ ಧೈರ್ಯ ತುಂಬಬೇಕಿರುವುದು ನಮ್ಮ ಕರ್ತವ್ಯ. ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದರು.

ಪ್ರಾಣ ಉಳಿಬೇಕು: ಕರೊನಾ ಮಹಾಮಾರಿ ಸಾಕಷ್ಟು ಜನರ ಬಲಿ ಪಡೆದಿದೆ. ವ್ಯಾಕ್ಸಿನ್ ಮೂಲಕ ಮಾರಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಲಾಗುತ್ತಿದೆ. ಖಾಸಗಿಯಲ್ಲಿ ವ್ಯಾಕ್ಸಿನ್‌ಗೆ ಸಾವಿರಾರು ರೂಪಾಯಿ ತೆರಬೇಕಿದೆ. ಕರೊನಾ ಲಾಕ್‌ಡೌನ್‌ನಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹೊಸಕೋಟೆ ತಾಲೂಕಿನಲ್ಲಿ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net