ಬಿಜೆಪಿ ಟಿಕೆಟ್ ಸ್ಥಳೀಯರಿಗೆ ನೀಡಿ

Ediga
Published on

ಚಿತ್ರದುರ್ಗ: ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ಹೊರಗಿನವರಿಗೆ ಟಿಕೆಟ್ ನೀಡಿದ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಿಜೆಪಿಯ ವರಿಷ್ಠರು ಸ್ಥಳೀಯರಿಗೆ ಈ ಬಾರಿ ಟಿಕೆಟ್ ನೀಡಬೇಕು ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಜಿಲ್ಲಾ ಘಟಕದ ಅಧ್ಯಕ್ಷ ಸಿ.ತಿಪ್ಪೇಸ್ವಾಮಿ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರಗಿನವರು ಗೆದ್ದರೂ ಜಿಲ್ಲೆಯ ಬಗ್ಗೆ ಕಾಳಜಿ ತೋರುವುದಿಲ್ಲ. ಇಲ್ಲಿನ ಸಮಸ್ಯೆ ತಿಳಿದವರಿಗೆ ಟಿಕೆಟ್ ನೀಡಿದಲ್ಲಿ ಜನರೊಟ್ಟಿಗೆ ಇದ್ದು, ಬಗೆಹರಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ಸೂಕ್ತರಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.

ಚಿತ್ರದುರ್ಗದ ಅಕ್ಕ-ಪಕ್ಕ ಜಿಲ್ಲೆಗಳಾದ ದಾವಣಗೆರೆ, ತುಮಕೂರು ಜಿಲ್ಲೆಗಳು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗಿವೆ. ಇದಕ್ಕೆ ಸ್ಥಳೀಯರಿಗೆ ಅವಕಾಶ ಮಾಡಿಕೊಟ್ಟಿರುವುದೇ ಪ್ರಮುಖ ಕಾರಣ. ಬದ್ಧತೆಯಿಂದ ಕ್ಷೇತ್ರಕ್ಕಾಗಿ ಶ್ರಮಿಸುತ್ತಾರೆ. ಕಳೆದ ಎರಡ್ಮೂರು ದಶಕದಿಂದಲೂ ಜಿಲ್ಲೆ ಪ್ರಗತಿ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯೂ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಆದರೆ, ಐತಿಹಾಸಿಕ ಸ್ಥಳಗಳಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲ. ಕೈಗಾರಿಕಾ ಕಾರಿಡಾರ್ ಇಲ್ಲದೆ, ಯುವಸಮೂಹ ಉದ್ಯೋಗಕ್ಕಾಗಿ ಗುಳೆ ಹೋಗುವುದು ನಿಂತಿಲ್ಲ. ಅಭಿವೃದ್ಧಿ ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿವೆ. ಆದ್ದರಿಂದ ಸ್ಥಳೀಯರಿಗೆ ನೀಡಬೇಕು. ಇದರಿಂದ ಪಕ್ಷದ ಗೆಲುವಿಗೂ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಉಪಾಧ್ಯಕ್ಷ ಮನು, ಪದಾಧಿಕಾರಿಗಳಾದ ಮೋಹನ್, ರಂಗನಾಥ್, ಗಂಗಾಧರ್, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net