

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ. ಪಕ್ಷ ಗುರುತಿಸಿ ಟಿಕೆಟ್ ಕಲ್ಪಿಸಿದರೆ ಕ್ಷೇತ್ರಾಭಿವೃದ್ಧಿಗೆ ನನ್ನದೇ ಆದ ಸಂಕಲ್ಪಗಳಿವೆ ಎ.ಕೆ. ಫೌಂಡೇಷನ್ ಅಧ್ಯಕ್ಷ ಕೆ.ಬಿ. ಕೊಟ್ರೇಶ್ ಹೇಳಿದರು.
ಸಂಘ ಪರಿವಾರದ ಚಟುವಟಿಕೆಗಳ ಜತೆಯಲ್ಲಿದ್ದೇನೆ. ಪಕ್ಷದ ಪ್ರಾಥಮಿಕ ಸದಸ್ವತ್ವ ಪಡೆದು ಸಾಮಾನ್ಯ ಕಾರ್ಯಕರ್ತನಾಗಿರುವೆ. ಟಿಕೆಟ್ ದೊರೆತಲ್ಲಿ ಬಿಜೆಪಿ ಜತೆಗೆ ವೈಯಕ್ತಿಕ ಪ್ರಣಾಳಿಕೆ ಎರಡನ್ನೂ ಇರಿಸಿಕೊಂಡು ಕೆಲಸ ಮಾಡುವ ಇರಾದೆ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿ ಎಲ್ಲ ಸ್ಥಳೀಯ ಮುಖಂಡರ ಸಂಪರ್ಕದಲ್ಲಿದ್ದೇನೆ. ರಾಜ್ಯ ನಾಯಕರೂ ನನ್ನ ಜತೆಯಲ್ಲಿದ್ದಾರೆ. ಅವರು ಯಾರೆಂಬುದನ್ನು ಸಂದರ್ಭ ಬಂದಾಗ ತಿಳಿಸುವೆ ಎಂದ ಅವರು, ನರೇಂದ್ರ ಮೋದಿ ನನ್ನ ಬೆನ್ನೆಲುಬು. ಯಡಿಯೂರಪ್ಪ ನನ್ನ ಗುರುಗಳು ಎಂದೂ ಹೇಳಿದರು.
ದೇಶದ ಸುರಕ್ಷತೆ ದೃಷ್ಟಿಯಿಂದ ನರೇಂದ್ರ ಮೋದಿ ಅವರನ್ನು ಮತ್ತೆ ಗೆಲ್ಲಿಸುವ ಅಗತ್ಯವಿದೆ. ಸ್ಥಳೀಯ ಮುಖಂಡರ ನಡುವೆ ಸಣ್ಣಪುಟ್ಟ ಮನಸ್ತಾಪ ಇರಬಹುದು. ಚುನಾವಣೆ ಘೋಷಣೆಯಾದ ನಂತರ ಎಲ್ಲರೂ ಒಂದಾಗುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಾವಣಗೆರೆ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ತರುವುದು ನನ್ನ ಆದ್ಯತೆ. ತೋಳಹುಣಸೆ ಬಳಿ ನ್ಯಾಷನಲ್ ಟೆಕ್ಸ್‌ಟೈಲ್ ಪಾರ್ಕ್‌ಗೆ ನಿಗದಿಯಾಗಿದ್ದ 150 ಎಕರೆ, ರೇಷ್ಮೆ ಇಲಾಖೆಗೆ ಸಂಬಂಧಿಸಿದ 70 ಎಕರೆ ಬಳಕೆಯಾಗಿಲ್ಲ. ಅಲ್ಲಿ ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗ ಕಲ್ಪಿಸುವ ಇರಾದೆ ಇದೆ.
ಭದ್ರಾ ಅಚ್ಚುಕಟ್ಟಿನ ಬಲ-ಎಡ ದಂಡ ನಾಲೆ ರೈತರಿಗೆ ಉಚಿತ ಸಾವಯವ ಗೊಬ್ಬರ ವಿತರಣೆ, ಆಧುನಿಕ ಸೌಲಭ್ಯವುಳ್ಳ ಆಸ್ಪತ್ರೆ, ಕನ್ನಡದ ಹೋರಾಟಗಳ ಕುರಿತಾದ ಪುಸ್ತಕಗಳ ಪ್ರಕಟಣೆ, ಸ್ತ್ರೀಶಕ್ತಿ ಸಂಘಗಳಿಗೆ ಕಿರು ಸಾಲ ವಿತರಣೆಯ ಉದ್ದೇಶಗಳಿವೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬ ಮಾತಿದೆ, ಎದುರಾಳಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಸ್ಪರ್ಧೆ ಹೇಗೆ ಎಂಬ ಪ್ರಶ್ನೆಗೆ ‘ಫೀಲ್ಡ್, ಪಿಚ್ ರೆಡಿಯಾದ ನಂತರವೇ ಬೌಲಿಂಗ್ ಫಾಸ್ಟ್, ಸ್ಪಿನ್ ಅಥವಾ ಸ್ವಿಂಗ್ ಮಾಡಬೇಕೆ ಎಂಬ ಬಗ್ಗೆ ನಿರ್ಧರಿಸುತ್ತೇವೆ’ ಎಂದರು.
ಬಿಜೆಪಿಯಿಂದ ಅಂತಿಮವಾಗಿ ಯಾರಿಗೇ ಟಿಕೆಟ್ ಸಿಕ್ಕರೂ ನೂರಕ್ಕೆ ನೂರರಷ್ಟು ಅವರ ಪರವಾಗಿ ಕೆಲಸ ಮಾಡಲಿದ್ದೇನೆ. ಪಕ್ಷ ಗೆಲ್ಲುವುದು ಮುಖ್ಯ ಎಂದೂ ಹೇಳಿದರು.