ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಯಾವುದೇ ಗೊಂದಲವಿಲ್ಲ:ಸಂಸದ ಪ್ರಜ್ವಲ್ ರೇವಣ್ಣ

ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಯಾವುದೇ ಗೊಂದಲವಿಲ್ಲ:ಸಂಸದ ಪ್ರಜ್ವಲ್ ರೇವಣ್ಣ
Published on

ಹಾಸನ: ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಯಾವುದೇ ಗೊಂದಲವಿಲ್ಲ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ಗೊಂಡಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದರು.
ವಕೀಲರ ಭವನದಲ್ಲಿ ಮಂಗಳವಾರ ಮತಯಾಚನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ವಿಚಾರವಾಗಿ ಯಾವುದೇ ರೀತಿ ಅಪಸ್ವರವಿಲ್ಲ. ಈಗಾಗಲೇ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯವರು ಕೇಂದ್ರದಿಂದ ಆಗಮಿಸಿದ್ದಾರೆ ಅವರ ಜೊತೆ ದೇವೇಗೌಡರು ಕುಳಿತು ಚರ್ಚೆ ನಡೆಸಿದ್ದಾರೆ. ನಾವು ಹೆಚ್ಚುವರಿ ಒಂದು ಸೀಟ್‌ನ್ನ ಕೇಳಿದ್ದೆವು ಆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಮೈತ್ರಿ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ ಸೀಟು ಹಂಚಿಕೆ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಅವೆಲ್ಲವೂ ಕೂಡ ಸರಿಯಾಗಲಿದೆ. ಅಲ್ಲದೆ ನಾವು ಕೇಳಿರುವಂತಹ ಹೆಚ್ಚುವರಿಯಾಗಿ ಸೀಟುಗಳ ಬಗ್ಗೆ ಚರ್ಚೆ ನಡೆಯಲಿದೆ. ಅದನ್ನು ಬಿಟ್ಟು ಮೈತ್ರಿ ವಿಚಾರವಾಗಿ ಯಾವುದೇ ರೀತಿ ಅಪಸ್ವರ ಇಲ್ಲ ಎಂದು ಹೇಳಿದರು.
ಹಾಸನದಲ್ಲಿ ಕೆಲ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು, ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಬಂದರೆ ಬಿಜೆಪಿಯ ಮುಖಂಡರನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದು. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನ ಮಾಡುತ್ತೇನೆ. ಬಿಜೆಪಿಯ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿರುವುದರಿಂದ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ಗುರಿ ಇರುವುದು ಕಾಂಗ್ರೆಸ್‌ನ್ನು ಹಾಸನದಿಂದ ದೂರ ಹಿಡಬೇಕು. ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡಬೇಕು, ಇದರ ಜತೆಗೆ ದೇವೇಗೌಡರ ಕೈಯನ್ನ ಬಲಪಡಿಸುವುದು ನಮ್ಮ ಗುರಿ ಆಗಿದೆ ಎಂದು ಹೇಳಿದರು.
ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧೆಯ ಬಗ್ಗೆ ಯಾವುದೇ ಮಾಹಿತಿ ಆಗಿಲ್ಲ. ಅಲ್ಲಿಯ ಕಾರ್ಯಕರ್ತರು ಮತ್ತು ಮುಖಂಡರ ಒತ್ತಡ ಕೂಡ ಇದೆ. ಆದರೆ ಎಲ್ಲರ ಅಭಿಪ್ರಾಯವನ್ನ ಸಂಗ್ರಹಿಸಿ ದೇವೇಗೌಡರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ನಾನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದೇನೆ. ಶೀಘ್ರದಲ್ಲಿ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಲಾಗುವುದು ಆ ಮೂಲಕ ಅವರಿಂದ ಆಶೀರ್ವಾದ ಕೋರುತ್ತೇನೆ ಎಂದು ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net