ಬಿಜೆಪಿ-ಜೆಡಿಎಸ್ ಮೈತ್ರಿ ಲಾಭ-ನಷ್ಟ ಮುಂದೆ ಗೊತ್ತಾಗಲಿದೆ

vishwanath news
ವಿಜಯಪುರದ ಜಲನಗರದ ಬುದ್ಧವಿಹಾರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶರ್ಪಡ್ ಇಂಡಿಯಾ ಇಂಟರನ್ಯಾಶನಲ್ ಹಾಗೂ ವಿಜಯಪುರ ಜಿಲ್ಲೆಯ ವಿವಿಧ ಹಾಲುಮತ ಸಮಾಜದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಮಾತನಾಡಿದರು. ಮಾಜಿ ಸಚಿವ ಎಚ್.ಎಂ.ರೇವಣ್ಣ, ಹಾಲುಮತ ಸಮಾಜದ ವಿವಿಧ ಜಿಲ್ಲಾ ಹಾಗೂ ತಾಲೂಕು ಮುಖಂಡರು ಉಪಸ್ಥಿತರಿದ್ದರು.
Published on

ವಿಜಯಪುರ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೆ, ಇದು ರಾಜ್ಯದ ಜನತೆಗೆ ಹೊಸದೇನು ಅಲ್ಲ. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಕೂಡ ಮೈತ್ರಿ ಮಾಡಿಕೊಂಡಿತ್ತು. ಈಗ ಬಿಜೆಪಿ-ಜೆಡಿಎಸ್ ಆಗಿದೆ. ಮತದಾರರು ಈ ಮೈತ್ರಿಯನ್ನು ಯಾವ ರೀತಿ ಸ್ವೀಕರಿಸುತ್ತಾರೆ. ಅನ್ನುವುದನ್ನು ಚುನಾವಣೆ ಫಲಿತಾಂಶದ ನಂತರ ತಿಳಿಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವಾನಾಥ ಹೇಳಿದರು.

ಜಲನಗರದ ಬುದ್ಧವಿಹಾರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶರ್ಪಡ್ ಇಂಡಿಯಾ ಇಂಟರನ್ಯಾಶನಲ್ ಹಾಗೂ ವಿಜಯಪುರ ಜಿಲ್ಲೆಯ ವಿವಿಧ ಹಾಲುಮತ ಸಮಾಜದ ಸಂಘಟನೆಗಳ ನೇತೃತ್ವದಲ್ಲಿ ಪೂರ್ವಭಾವಿ ಸಭೆಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅದರ ಪರಿಣಾಮ ಮೈನಸ್ ಆಗುತ್ತೋ, ಇಲ್ಲ ಪ್ಲಸ್ ಆಗುತ್ತೋ ಎಂಬುದು ಲೋಕಸಭೆ ಚುನಾವಣೆಯಲ್ಲಿ ಮತದಾರ ಹಾಕುವ ಮತದಾನದ ಮೇಲೆ ಲಾಭ-ನಷ್ಟ ಗೊತ್ತಾಗಲಿದೆ ಎಂದರು.

ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಬಿಜೆಪಿಗೆ ಲಾಭ ಆಗಿತ್ತು. ಈಗಲೂ ಅಷ್ಟೆ ಬಿಜೆಪಿ - ಜೆಡಿಎಸ್ ಹೊಂದಾಣಿಕೆ ಕಾಂಗ್ರೆಸ್ ಗೆ ಲಾಭ ಆಗುತ್ತೆ ಅಷ್ಟೆ. ನಾನು ಸದ್ಯ ಯಾವ ಪಾರ್ಟಿಯಲ್ಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕೀಯದಲ್ಲಿ ನಿವೃತ್ತಿಯಿಲ್ಲ. ಜೀವನ ಇರುವವರೆಗೂ, ಉಸಿರು ಇರುವವರೆಗೆ ರಾಜಕಾರಣದಲ್ಲಿ ಇದ್ದೇ ಇರ್ತೇನೆ ಎಂದರು. ಕಾಂಂಗ್ರೆಸ್ ಮುಖಂಡ ಬಿ ಕೆ ಹರಿಪ್ರಾಸಾದ್ ಈಡಿಗ ಸಮಾಜಕ್ಕೆ ರಾಜಕೀಯ ಸ್ಥಾನ ಮಾನ ಏನು ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಅದು ಅವರ ವೇದನೆಯಾಗಿದೆ. ಈ ವೇದನೆಯನ್ನು ಬಹಿರಂಗವಾಗಿ ಪ್ರದರ್ಶನ ಮಾಡಬಾರದಿತ್ತು ಎಂದರು.

ಬಿ.ಕೆ. ಹರಿಪ್ರಸಾದ ಅವರು ತಮ್ಮ ಸಮುದಾಯಕ್ಕೆ ಏನು ಸಿಗಲಿಲ್ಲ ಅಂತ ಹೇಳುತ್ತಿದ್ದಾರೆ. ಆದರೆ ಬಹುತೇಕ ಈಡಿಗ ಸಮುದಾಯಕ್ಕೆ ಕಾಂಗ್ರೆಸ್‌ನಲ್ಲಿ ಸಿಕ್ಕ ಅವಕಾಶ ಬೇರೆ ಯಾವ ಪಕ್ಷದಲ್ಲಿಯೂ ಸಿಕ್ಕಿಲ್ಲ. ಅದೇ ಸಮಾಜದ ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದರು. ಈಗ ಮಧು ಬಂಗಾರಪ್ಪ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಸಚಿವರಾಗಿದ್ದಾರೆ ಎಂದರು.

ಇಂಡಿಯಾ ಭಾರತ ಎರಡು ಒಂದೇ ಎಂದು ಹೇಳಿ ಬದಲಾವಣೆಗೆ ಈ ಹಿಂದೆ ವಿರೋಧ ವ್ಯಕ್ತವಾಗಿತ್ತು. ಈಗ ಈ ವಿಷಯ ಮುನ್ನಲೆಗೆ ಬಂದಿದೆ ಅಷ್ಟೆ ಎಂದರು. ಸಿಎಂ ಸಿದ್ದರಾಮಯ್ಯ ಜೆಡಿಎಸ್ ಬಿಜೆಪಿ ಒಂದೇ ಟೀಂ ಎನ್ನುತ್ತಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ ಪ್ರಶ್ನೆಗೆ ವಿಶ್ವನಾಥ ಪ್ರತಿಕ್ರಿಯೆಗೆ ನಿರಾಕರಿಸಿದರು.
ಕುಟುಂಬ ರಾಜಕಾರಣ: 1990ರಲ್ಲಿ ತಾವು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಜೆಡಿಎಸ್ ಮೈತ್ರಿ ಸರ್ಕಾರವಿತ್ತು. 12 ಸ್ಥಾನ ಜೆಡಿಎಸ್‌ಗೆ ಹಂಚಿಕೆಯಾಗಿತ್ತು. ಅದರಲ್ಲಿ ಉತ್ತರ ಕರ್ನಾಟಕದ ಲಿಂಗಾಯತರು ಇಬ್ಬರು, ಕುರುಬರು ಬಿಟ್ಟರೆ ಉಳಿದರು. ದೇವೇಗೌಡರ ಕುಟುಂಬದವರೆ ಸ್ಪರ್ಧೆಗೆ ನಿಂತರು. ನಾನಾ ಸಾಕಷ್ಟು ಬಾರಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಒಂದು ಮುಸ್ಲಿಂ, ಇಂದು ದಲಿತರಿಗೆ ಟಿಕೆಟ್ ಹಂಚಿಕೆ ಮಾಡಿ ಎಂದು ಹೇಳಿದರೂ ಸಹ ಅವರ ಕೇಳಲಿಲ್ಲ ಎಂದರು.

ಸದ್ಯ ದೇಶದಲ್ಲಿ ಕುರುಬ ಸಮಾಜ ಹರಿದು ಹಂಚಿ ಹೋಗಿದೆ. ಸುಮಾರು 12 ಕೋಟಿ ಜನ ಕುರುಬ ಸಮಾಜದವರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇವರನ್ನು ಒಗ್ಗಡಿಸುವ ಕೆಲಸ ಈಗ ಮಾಡಲಾಗುತ್ತಿದೆ. ಇದರ ಭಾಗವಾಗಿ ಮುಂದಿನ ದಿನಗಳಲ್ಲಿ ಶರ್ಪಡ್ ಇಂಡಿಯಾ ಇಂಟರನ್ಯಾಶನಲ್ ಹೆಸರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿದಂತೆ ಹಾಲುಮತ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net