

ಚಿತ್ರದುರ್ಗ: ಲೋಕಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಜಿಲ್ಲಾ ಘಟಕದ ಕೆಲ ಪದಾಧಿಕಾರಿಗಳ ಆಯ್ಕೆ ವಿಚಾರವಾಗಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಬೂದಿ ಮುಚ್ಚಿದ ಕೆಂಡದಂತಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮರು ಆಯ್ಕೆ, ಪ್ರಧಾನ ಕಾರ್ಯದರ್ಶಿಗಳಾಗಿ ಸಂಪತ್‌ಕುಮಾರ್, ಸುರೇಶ್ ಸಿದ್ದಾಪುರ ನೇಮಕದ ಬಳಿಕ ಜಿಲ್ಲಾ ಬಿಜೆಪಿಯಲ್ಲಿ ಈ ಮೂವರ ವಿರುದ್ಧ ಬಂಡಾಯ ಏಳುವ ಲಕ್ಷಣ ಕಂಡು ಬರುತ್ತಿದೆ.
ಈ ಆಯ್ಕೆ ಪ್ರಕ್ರಿಯೆಯಿಂದ ಅಸಮಾಧಾನಗೊಂಡ ಮುಖಂಡರು, ಕಾರ್ಯಕರ್ತರು ಬದಲಾಯಿಸುವಂತೆ ಪಟ್ಟು ಹಿಡಿದಿದ್ದಾರೆ. ಎ.ಮುರಳಿ, ಸಂಪತ್ ಹಠವೋ ಬಿಜೆಪಿ ಬಚಾವೋ ಎಂದು ಗುರುವಾರ ಆಕ್ರೋಶ ಹೊರಹಾಕಿದರು.
ನಗರದ ಹೊರವಲಯದ ಖಾಸಗಿ ಹೋಟೆಲ್‌ವೊಂದರ ಮುಂಭಾಗ ಮೋದಿ ಮತ್ತೊಮ್ಮೆ ಎಂಬ ನಾಮಫಲಕ ಕೈಯಲ್ಲಿಡಿದು, ಜಿಲ್ಲೆಯ ಬಿಜೆಪಿ ಜಿಲ್ಲಾ ಘಟಕ ಉಳಿಸಿ ಎಂದು ಘೋಷಣೆ ಕೂಗಿ, ಆವರಣದಲ್ಲಿ ಪ್ರತಿಭಟನೆಗೂ ಮುಂದಾದರು. ಬಳಿಕ ಸಭೆ ನಡೆಸಿದರು.
ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದು, ಇದು ಯಾರಪ್ಪನ ಸೊತ್ತಲ್ಲ ಎಂಬ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾದವು. ಇದು ತಾತ್ಕಾಲಿಕವಲ್ಲ, ಬದಲಾವಣೆ ಮಾಡುವವರೆಗೂ ಹೋರಾಟ ಮುಂದುವರಿಸೋಣ. ಇಲ್ಲದಿದ್ದರೆ, ನಮ್ಮನ್ನು ಬಿಜೆಪಿಯಲ್ಲಿ ಬೆಳೆಯಲು ಬಿಡುವುದಿಲ್ಲ. ರಾಜ್ಯಾಧ್ಯಕ್ಷರ ಬಳಿ ಹೋಗೋಣ ಎಂಬ ತೀರ್ಮಾನ ಕೈಗೊಂಡರು.
ಜಿಲ್ಲಾ ಸಹ ಪ್ರಭಾರಿ ಪ್ರೇಮ್‌ಕುಮಾರ್ ಸಭೆಗೆ ಆಗಮಿಸಿ, ಅಸಮಾಧಾನಗೊಂಡ ಮುಖಂಡರು, ಕಾರ್ಯಕರ್ತರ ಜತೆ ಗಂಟೆಗೂ ಅಧಿಕ ಹೊತ್ತು ಚರ್ಚೆ ನಡೆಸಿದರು.
ಹೊಸದುರ್ಗ ಬಿಜೆಪಿ ಮುಖಂಡ ಸಾ.ಚಾ.ಮಂಜಣ್ಣ ಮಾಧ್ಯಮದವರೊಂದಿಗೆ ಮಾತನಾಡಿ, ಈ ಹಿಂದೆ ಕೆ.ಎಸ್.ನವೀನ್ ಅವರು ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಜಿಲ್ಲೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿತ್ತು. ಮುರಳಿ ಅವರ ಸಂಘಟನೆ ನೋಡಿದ್ದೇವೆ. ಅವರಿಂದ ಲೋಕಸಭೆ ಚುನಾವಣೆ ಗೆಲುವು ಅಸಾಧ್ಯ. ಹೀಗಾಗಿ ಈ ಮೂವರ ಬದಲಾವಣೆ ಅಗತ್ಯವಿದೆ. ಹೊಸಬರಿಗೆ ಅವಕಾಶ ನೀಡಿದಾಗ ಪಕ್ಷಕ್ಕೆ ದುಡಿದವರಿಗೆ ಸ್ಥಾನಮಾನ ಸಿಗಲಿದೆ ಎಂದು ಹುಮ್ಮಸ್ಸಿನಿಂದ ಸಂಘಟನೆಯಲ್ಲಿ ತೊಡಗಿ, ಚುನಾವಣೆಗಳಲ್ಲಿ ಪಕ್ಷಕ್ಕೆ ಬಲ ತುಂಬಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿ, ನಮ್ಮಲ್ಲಿ ಅಸಮಾಧಾನ ಇರುವುದು ನಿಜ. ಇದನ್ನು ಬಿಜೆಪಿ ರಾಜ್ಯ ನಾಯಕರಿಗೆ ತಿಳಿಸಿದ್ದೇವೆ. ಹಿರಿಯರ ಸಮ್ಮುಖದಲ್ಲಿ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್, ಮೊಳಕಾಲ್ಮುರು ಮಂಡಲ ಅಧ್ಯಕ್ಷ ಡಾ.ಮಂಜುನಾಥ್, ಒಬಿಸಿ ಮೋರ್ಚಾ ಅಧ್ಯಕ್ಷ ಪಿ.ಲಕ್ಷ್ಮಣ, ಪಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್, ಪಪಂ ಅಧ್ಯಕ್ಷ ಅಶೋಕ್, ಮುಖಂಡರಾದ ನಾಗರಾಜ್ ಬೇದ್ರೆ, ಪಾಲಯ್ಯ, ನಂದಿ ನಾಗರಾಜ್, ಶ್ಯಾಮಲಾ ಶಿವಪ್ರಕಾಶ್, ಶಶಿಧರ್, ರತ್ನಮ್ಮ, ರೂಪಾ ಇತರರಿದ್ದರು.