

ಹಾಸನ: ಜಿಲ್ಲಾ ಬಿಜೆಪಿ ಘಟಕದಲ್ಲಿ ಉಂಟಾಗಿರುವಂತಹ ಬಣದ ರಾಜಕೀಯ ಮತ್ತು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸುವ ಸಂಬಂಧ ಉಂಟಾಗುತ್ತಿರುವ ತಿಕ್ಕಾಟದಿಂದ ಬೇಸತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಕೆ. ವೇಣುಗೋಪಾಲ್ ರಾಜೀನಾಮೆ ನೀಡಿದ್ದಾರೆ.
ಆರ್.ಎಸ್.ಎಸ್. ಹಿನ್ನೆಲೆಯ ವೇಣುಗೋಪಾಲ್, ಪ್ರೀತಂ ಜೆ.ಗೌಡ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿದ್ದರು. ಅಂತಿಮ ಕ್ಷಣದಲ್ಲಿ ಹುದ್ದೆ ಕೈತಪ್ಪಿತ್ತು, ಆದರೂ ಕೂಡ ಇವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.
ಭಾನುವಾರ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ಸಲ್ಲಿಸಿರುವುದು ಬಿಜೆಪಿಯೊಳಗಿನ ಸಿದ್ಧಾಂತ ಹಾಗೂ ಪ್ರಜ್ವಲ್ ವಿರೋಧಿ ನಿಲುವುಗಳ ನಡುವಿನ ತಿಕ್ಕಾಟ ಜಿಜೆಪಿಯಲ್ಲಿ ಇದೀಗ ಬಹಿರಂಗಗೊಂಡಿದೆ.
ಪತ್ರಿಕೆ ಜೊತೆ ಮಾತನಾಡಿರುವ ವೇಣುಗೋಪಾಲ್, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದುಕೊಂಡು ಬಂದಿದ್ದೇನೆ. ಆದರೆ ಇತ್ತೀಚಿನ ದಿನದಲ್ಲಿ ನನಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಬೇಕು ಎನ್ನುವ ತೀವ್ರ ಒತ್ತಡವಿತ್ತು. ಆದರೆ ನಾನು ಬಿಜೆಪಿಗೆ ನಿಷ್ಠನಾಗಿ ಉಳಿಯಲು ನಿರ್ಧರಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದರು.ಹಾಸನ