ಬಿಜೆಪಿ ಜಿಲ್ಲಾ ಕಚೇರಿ ಶೀಘ್ರ ಲೋಕಾರ್ಪಣೆ

bjp office visit
Published on

ಬೀದರ್: ಇಲ್ಲಿನ ನೌಬಾದ್ ಹತ್ತಿರ ನಿರ್ಮಾಣ ಹಂತದಲ್ಲಿರುವ ಸುಸಜ್ಜಿತ ಬಿಜೆಪಿ ಜಿಲ್ಲಾ ಕಚೇರಿ ಕಾಮಗಾರಿ ಕೊನೇ ಹಂತದಲ್ಲಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಮಾಡುವುದಾಗಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು.

ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಪಕ್ಷಕ್ಕಾಗಿ ಸ್ವಂತ ಕಟ್ಟಡ ನಿರ್ಮಿಸಬೇಕು ಎಂಬ ಕಾರ್ಯಕರ್ತರ ಬಹುದಿನಗಳ ಬೇಡಿಕೆ ಈಡೇರುವ ಕಾಲ ಸನ್ನಿಹಿತವಾಗಿದೆ ಎಂದರು.

ಪಕ್ಷದ ಜನಪ್ರತಿನಿಗಳು, ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಹಕಾರದಿಂದ ಭವ್ಯ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಅಧ್ಯಕ್ಷರ ಕೋಣೆ, ಸಭಾಂಗಣ ಸೇರಿ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಕಲ್ಲುಗಳ ಹಾಸುವಿಕೆ ಸೇರಿ ಎಲ್ಲ ಕೆಲಸ ಅಚ್ಚುಕಟ್ಟಾಗಿ ನಡೆದಿದ್ದು, ಅಂತಿಮ ಹಂತದ ಕೆಲಸ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸಂಬಂತರಿಗೆ ಸೂಚಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಮತ್ತು ರಾಜ್ಯದ ಸಚಿವರು, ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಕಚೇರಿ ಲೋಕಾರ್ಪಣೆ ಮಾಡಲಾಗುವುದು ಎಂದ ಅವರು, ಜನಪ್ರತಿನಿಗಳು, ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಪಕ್ಷವನ್ನು ಜಿಲ್ಲೆಯಲ್ಲಿ ಬೇರು ಮಟ್ಟದಿಂದ ಬಲಪಡಿಸುವಲ್ಲಿ ಈ ನೂತನ ಕಾರ್ಯಾಲಯ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಬೀದರ್ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ ಪಾಟೀಲ್ ಗಾದಗಿ, ಅರಹಂತ ಸಾವಳೆ, ಜಿಲ್ಲಾ ಕಾರ್ಯದರ್ಶಿ ಕಿರಣ ಪಾಟೀಲ್, ಔರಾದ್ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ಪ್ರತೀಕ್ ಚವ್ಹಾಣ್, ಸುರೇಶ ಭೋಸ್ಲೆ, ಸಚಿನ್ ರಾಠೋಡ್, ವೀರೂ ರಾಜಾಪುರೆ, ಯೋಗೇಶ ಪಾಟೀಲ್ ದಾಬಕಾ, ಖಂಡೋಬಾ ಕಂಗಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net