ಬಿಜೆಪಿ ಜತೆಗಿನ ಮೈತ್ರಿಗೆ ನನ್ನ ಒಪ್ಪಿಗೆ ಇಲ್ಲ

20230910_132750 copy
Published on

ಯಾದಗಿರಿ: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾತುಕತೆ ನಡುವೆ ದಳಪತಿಗಳಲ್ಲಿಯೇ ಅತೃಪ್ತಿ, ಅಸಮಾಧಾನ ಸ್ಫೋಟಗೊಂಡಿದೆ. ಕೇಸರಿ ಪಡೆಯೊಂದಿಗಿನ ಮೈತ್ರಿಗೆ ಪಕ್ಷದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅಪಸ್ವರ ಎತ್ತಿ ಕ್ಯಾತೆ ತೆಗೆದಿದ್ದಾರೆ.

ಬಿಜೆಪಿ ಜತೆಗೆ ಮೈತ್ರಿಗೆ ನನ್ನ ಸಹಮತ ಇಲ್ಲ.‌ ಇದಕ್ಕೆ ಒಪ್ಪಲಾಗದು ಎಂದು ಶರಣಗೌಡ ಕಂದಕೂರು‌ ಖಾರವಾಗಿ ಹೇಳಿದ್ದಾರೆ. ಇದು ಲೋಕಸಮರದ ಹೊಸ್ತಿಲಲ್ಲಿ ದಳ ಪಾಳಯದೊಳಗೆ ಬಿರುಗಾಳಿ ಎಬ್ಬಿಸುವ ಸಾಧ್ಯತೆಗಳಿವೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ನಿರೀಕ್ಷೆಗೂ ಮೀರಿ ಹಿನ್ನಡೆ ಅನುಭವಿಸಿದೆ. ಕಡಿಮೆ ಮತ ಸಹ ಪಡೆದಿದೆ. ಹೀಗಿರುವಾಗ 

ಈಗ ಬಿಜೆಪಿ ಜೆತೆ ಕೈಜೋಡಿಸಿದರೆ ಪಕ್ಷಕ್ಕೆ ಮತ್ತೆ ದೊಡ್ಡ ಹೊಡೆತ ಬೀಳುತ್ತದೆ. ಇದು ರಾಜಕೀಯ ಅಸ್ತಿತ್ವದ ಪ್ರಶ್ನೆಯೂ ನಮ್ಮಲ್ಲಿ ಕಾಡುವಂತೆ ಮಾಡಿದೆ ಎಂದು ಹೇಳಿದ್ದಾರೆ.

ಕೇವಲ ಒಬ್ಬರು, ಇಬ್ಬರನ್ನು ಟಾರ್ಗೆಟ್ ಮಾಡಿಕೊಂಡು ಪಕ್ಷದ ವರಿಷ್ಠರು ಈ ರೀತಿ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಬಿಜೆಪಿ ಜತೆಗೆ ಮೈತ್ರಿ ಪ್ರಸ್ತಾಪ ಆಗುತ್ತಿರುವ ಕಾರಣದಿಂದ ಈಗಾಗಲೇ ಪಕ್ಷದ ಹಾಲಿ-ಮಾಜಿ ಶಾಸಕರಲ್ಲಿ ಅಸಮಾಧಾನ ಶುರುವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಒಂದೆಡೆ ಸೇರಿ ಚರ್ಚೆಯನ್ನೂ ಮಾಡಿದ್ದೇವೆ. ಮೈತ್ರಿ ನಿರ್ಧಾರ ಫೈನಲ್ ಆದರೆ ನಾನೂ ಸೇರಿ ಕೆಲವು  ಶಾಸಕರು ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಎಂದು ಕಂದಕೂರು ಹೇಳಿದ್ದಾರೆ.

ಬಿಜೆಪಿ ಜತೆಗಿನ ಮೈತ್ರಿಗೆ ನನ್ನ ಒಪ್ಪಿಗೆ ಇಲ್ಲ, ಆ ರೀತಿ ನಿರ್ಧಾರ ಆದಲ್ಲಿ ನನ್ನ ನಿರ್ಧಾರವನ್ನು ನಾನು ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಕಂದಕೂರ ಅವರ ಈ ಹೇಳಿಕೆ ಜೆಡಿಎಸ್ ಪಾಳಯದಲ್ಲಿ ತಲ್ಲಣ ಎಬ್ಬಿಸುವ ಜತೆಗೆ ವರಿಷ್ಠರನ್ನು ಸಹ ಇಕ್ಕಟ್ಟಿಗೆ ಸಿಲುಕಿಸುವಂತೆ‌ ಮಾಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ  19 ಸ್ಥಾನಗಳಲ್ಲಿ ಗೆದ್ದು ಭಾರಿ ಹಿನ್ನಡೆ ಅನುಭವಿಸಿದೆ. ಇಂಥದರಲ್ಲಿ ಲೋಕ ಸಮರದ ಮೈತ್ರಿ ವಿಷಯದಲ್ಲಿ ಪಕ್ಷದೊಳಗೆ ಗೊಂದಲ ಸೃಷ್ಟಿಯಾಗಿ ಕೆಲ ಶಾಸಕರು ಹೊರಗೆ ಕಾಲಿಟ್ಟರೆ ದಳ ಮತ್ತಷ್ಟು ವಿಲವಲ ಎನ್ನಲಿದೆ. ಸ್ಥಿತಿ ಜಟಿಲಗೊಂಡರೆ ಪಕ್ಷ ಇಬ್ಭಾಗಕ್ಕೂ ಇದು ನಾಂದಿ ಹಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net