

ಬಳ್ಳಾರಿ : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ವ್ಯವಹಾರದಲ್ಲಿ ಸಚಿವ ಬಿ.ನಾಗೇಂದ್ರ ಪಾತ್ರ ಏನಿಲ್ಲ. ಈ ವಿಷಯದಲ್ಲಿ ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಡಾ.ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಗಿ ನಾಗರಾಜ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆ ನೀತಿ ಸಂಹಿತೆ ಹಿನ್ನಲೆ ಸರ್ಕಾರ ಯಾವುದೆ ಅನುದಾನ ಬಳಕೆಗೆ ನಿರ್ಧಾರ ಕೈಗೊಂಡಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಸಚಿವ ಬಿ.ನಾಗೇಂದ್ರ ವಿರುದ್ಧ ಸೋತಿದ್ದರು. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಬಿ. ಶ್ರೀರಾಮುಲು ಸೋಲಿನ ಭೀತಿಯಿಂದ ಈ ಅಕ್ರಮ ವ್ಯವಹಾರದ ಹಗರಣವನ್ನು ದೊಡ್ಡದು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ ಯೂನಿಯನ್ ಬ್ಯಾಂಕ್‌ನ ಆರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ. ತಪ್ಪಿಸ್ಥರ ಯಾರೇ ಇರಲಿ ಅವರ ವಿರುದ್ಧ ಕಾನೂನು ಕ್ರಮವಹಿಸಲಾಗುವುದು. ಈ ಅಕ್ರಮ ವ್ಯವಹಾರದಲ್ಲಿ ಅಧಿಕಾರಿ ಚಂದ್ರಶೇಖರನ್ ಅವರಿಗೆ ಸಚಿವ ಬಿ. ನಾಗೇಂದ್ರ ಮೌಖಿಕವಾಗಿ ಆದೇಶ ನೀಡಿರುವುದು ಬಗ್ಗೆ ಆಧಾರವಿಲ್ಲ, ಆದ್ದರಿಂದ ಬಿಜೆಪಿ ರಾಜೀನಾಮೆ ಕೇಳುವ ಹಕ್ಕಿಲ್ಲ ಎಂದರು. ಡೆತ್ ನೋಟ್‌ನಲ್ಲಿಯೂ ಕೂಡ ಎಲ್ಲಿಯೂ ಸಚಿವ ನಾಗೇಂದ್ರ ಹೆಸರು ಕೂಡ ಪ್ರಸ್ತಾಪವಿಲ್ಲ. ಈ ಪ್ರಕರಣವನ್ನು ಬಯಲಿಗೆ ತಂದಿದ್ದೆ ಸಚಿವ ನಾಗೇಂದ್ರ ನಿಗಮಕ್ಕೆ 28 ಕೋಟಿ ರೂ. ವಾಪಾಸ್ಸು ಪಡೆಯುವಂತೆ ಮಾಡಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ತನಿಖೆ ಪೂರ್ಣಗೊಂಡು ತಪ್ಪಿಸ್ಥರು ಯಾರು ಎಂದು ತಿಳಿಯಲಿದೆ. ಮೃತ ಚಂದ್ರಶೇಖರನ್ ಮನೆಗೆ ಸಚಿವ ಬಿ. ನಾಗೇಂದ್ರ ಎರಡ್ಮೂರು ದಿನಗಳಲ್ಲಿ ಭೇಟಿ ಕುಟುಂಬಕ್ಕೆ ಸ್ವಾಂತನ ಹೇಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ, ಪಾಲಿಕೆ ಸದಸ್ಯ ಎಂ. ಪ್ರಭಂಜನ ಕುಮಾರ, ಬಗರ್ ಹುಕಂ ಸಾಗುವಳಿ ಸಕ್ರಮ ಸಮಿತಿಯ ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ತಿಮ್ಮನಗೌಡ, ಮುಖಂಡರಾದ ವೆಂಕಟೇಶ ಹೆಗಡೆ, ಸಂಗನಕಲ್ಲು ವಿಜಯಕುಮಾರ, ಎ.ಮಾನಯ್ಯ ಇತರರಿದ್ದರು.