

ಚನ್ನಪಟ್ಟಣ: ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಕೇಂದ್ರ ಒಳಗೊಂಡಂತೆ ಎಲ್ಲ ರಾಜ್ಯಗಳಲ್ಲೂ ತಮ್ಮದೇ ಸರ್ಕಾರವಿರಬೇಕು ಎಂದು ಬಿಜೆಪಿಯವರು ಎಂದುಕೊಂಡಿದ್ದಾರೆ. ಅದಕ್ಕಾಗಿ ಅವರು ನಡೆಸುತ್ತಿರುವ ಕುತಂತ್ರದ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಅವರಿಗೇ ಬೂಮರಾಂಗ್ ಆಗಲಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದರು.
ನಗರದ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ನೂತನ ಐಟಿಐ ಕಾಲೇಜನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಆಡಳಿತಾರೂಢ ಸರ್ಕಾರವನ್ನು ತೆಗೆಯಲು ಬಿಜೆಪಿ ಹೊರಟಿದೆ. ಆದರೆ, ಸರ್ಕಾರದ ಅಸ್ಥಿರತೆ ವಿಚಾರದಲ್ಲಿ ನಮಗೇನೂ ಗೊತ್ತಿಲ್ಲ ಎಂಬಂತೆ ಬಿಜೆಪಿಯವರಿದ್ದಾರೆ. ಇದು ಬಿಜೆಪಿಯ ಆಟ ಎಂದ ಇಡೀ ದೇಶಕ್ಕೆ ಗೊತ್ತು. ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಮಹಾರಾಷ್ಟ್ರದ ಶಾಸಕರನ್ನು ಹೈಜಾಕ್ ಮಾಡಿ ಇಟ್ಟುಕೊಂಡಿದ್ದಾರೆ. ಈ ಹಿಂದೆ ನಮ್ಮ ರಾಜ್ಯದ ಶಾಸಕರನ್ನೂ ಮುಂಬೈಗೆ ಕರೆದೊಯ್ದಿದ್ದರು. ಶಾಸಕರು ಈ ರೀತಿ ಹೋಗಬೇಕಾದರೆ ಯಾವ ಆಮಿಷಗಳು ಇರುತ್ತದೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಚುನಾಯಿತ ಸರ್ಕಾರ ಅಸ್ಥಿರಗೊಳಿಸುವಂಥದ್ದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ನಡೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವಸೇನೆ ನಾಯಕ ಏಕನಾಥ್ ಶಿವಸಿಂಧೆ ಶಿವಸೇನೆ ನಮ್ಮದೆಂದು ಕ್ಲೈಮ್ ಮಾಡಬಹುದು. ತಮ್ಮ ಬಳಿ ಇರುವ ಸಂಖ್ಯಾಬಲದ ಆಧಾರದ ಮೇಲೆ ಅವರು ಏನಾದರೂ ಮಾಡಬಹುದು. ಆದರೆ, ಚುನಾವಣೆೆಗೆ ಹೋದಾಗ ಮಾತ್ರ ನಿಜ ಗೊತ್ತಾಗಲಿದೆ. ಶಿವಸೇನೆ ಕಾರ್ಯಕರ್ತರು ಯಾರ ಜತೆಗೆ ನಿಲ್ಲುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತೀಮಾರ್ನವಾಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ನಾನ್ಯಾಕೆ ಸಾಫ್ಟ್ ಕಾರ್ನರ್ ಆಗಲಿ?: ಇತ್ತೀಚೆಗೆ ಕಾಂಗ್ರೆಸ್ ಬಗ್ಗೆ ಸಾಫ್ಟ್ ಕಾರ್ನರ್ ಆಗಿದ್ದೀರಿ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಮ್ಮ ಕುತ್ತಿಗೆ ಕುಯ್ದಿದ್ದೇ ಕಾಂಗ್ರೆಸ್ನವರು. ಅವರ ಬಗ್ಗೆ ನಾನ್ಯಾಕೆ ಸಾಫ್ಟ್ ಕಾರ್ನರ್ ತೋರಿಸಲಿ. ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ತೋರುವ ಪ್ರಶ್ನೆಯೇ ಇಲ್ಲ. ಆ ಎರಡು ಪಕ್ಷಗಳ ನಡವಳಿಕೆ ನೋಡಿದ್ದೇವೆ. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ಎರಡು ರಾಷ್ಟ್ರೀಯ ಪಕ್ಷಗಳ ಕುತಂತ್ರದ ಬಗ್ಗೆ ಅರಿವು ಮೂಡಿಸುತ್ತೇವೆ. ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ ಎಂದು ಜನರ ಮುಂದೆ ಹೋಗುತ್ತೇವೆಎಂದು ಎಚ್ಡಿಕೆ ಹೇಳಿದರು.
ಶಹಬ್ಬಾಸ್ ಎಂದ ಬಿಜೆಪಿ ಸಂಸದ: ನಾನು ಕಾಂಗ್ರೆಸ್ನವರ ರೀತಿ ಬೀದೀಲಿ ಬ್ಯಾರಿಕೇಡ್ ಹತ್ತಿ ಡ್ಯಾನ್ಸ್ ಮಾಡೋಕೆ ಹೋಗಬೇಕಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ವಾಸ್ತವಾಂಶ ಹೇಳಿದ್ದೇನೆ. ಯಾವುದೇ ರೀತಿ ಯಾರ ಜೊತೆ ರಾಜಿಯಾಗಲಿ, ಅನುಕಂಪದ ಪ್ರಶ್ನೆ ಅಲ್ಲ. ಇಡೀ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದೆ, ಸ್ವಾಯತ್ತ ಸಂಸ್ಥೆಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎಂಬುದನ್ನು ಚರ್ಚೆ ಮಾಡಿದ್ದೇನೆ. ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕರನ್ನು ಓಲೈಸಿಕೊಳ್ಳಲು ಈ ಮಾತು ಹೇಳಿಲ್ಲ. ನಾನು ಈ ಹೇಳಿಕೆ ಕೊಟ್ಟಾಗ ಬಿಜೆಪಿ ಸಂಸದರೊಬ್ಬರು ನನಗೆ ಪೋನ್ ಮಾಡಿ ಶಹಬ್ಬಾಸ್ ಹೇಳಿ, ಈ ವ್ಯವಸ್ಥೆ ಬಗ್ಗೆ ಸರಿಯಾಗಿ ಮಾತನಾಡಿದ್ದೀರಿ ಎಂದರು. ಆದರೆ ಆ ಸಂಸದರ ಹೆಸರು ಬಹಿರಂಗಪಡಿಸಲು ಎಚ್ಡಿಕೆ ನಿರಾಕರಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಜಯಮುತ್ತು, ಮಾಜಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್, ಜೆಡಿಎಸ್ ಮುಖಂಡರಾದ ಸಿಂಲಿಂ.ನಾಗರಾಜು, ಬೋರ್ವೆಲ್ ರಾಮಚಂದ್ರು, ಮಾಗನೂರು ಗಂಗರಾಜು, ನಾಗವಾರ ಶಂಭೂಗೌಡ, ಮೆಹರೀಶ್, ಮಹೇಶ್ವರ್, ರೇಖಾಉಮಾಶಂಕರ್, ಮಂಕುಂದ ನಂದೀಶ್, ಗಂಗೇದೊಡ್ಡಿ ನಿಂಗೇಗೌಡ, ಬೋರೆಗೌಡ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.