

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಕಳೆದ ವಿಧಾನಸಭೆಯ ಸೋಲಿನಿಂದ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ. ಪ್ರತಿಯೊಬ್ಬ ಕಾರ್ಯಕರ್ತರ ಬೆನ್ನೆಲುಬಾಗಿ ನಾವೆಲ್ಲ ಮುಖಂಡರು ಇರುತ್ತೇವೆ. ಮತ್ತೆ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೇರಿದ್ದು, ದೇಶದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿವಹಿಸಲಾಗುವುದು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ನಗರದ ಸೈಯದ್ ಪ್ಯಾಲೇಸ್‌ನಲ್ಲಿ ತಾಲೂಕು ಬಿಜೆಪಿ ಘಟಕದಿಂದ ಬುಧವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಹೊಸಕೋಟೆ ಕ್ಷೇತ್ರದಿಂದ ಈಗಿನ ಶಾಸಕ ಕಾಂಗ್ರೆಸ್‌ಗೆ 25 ಸಾವಿರಕ್ಕೂ ಹೆಚ್ಚು ಮತ ಕೊಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಹೆಚ್ಚುವರಿ ಪಡೆದ ಮತ ಕೇವಲ 2 ಸಾವಿರದಷ್ಟು. ಇದಕ್ಕೆ ಇಲ್ಲಿನ ನಾಯಕ ಎಂಟಿಬಿ ನಾಗರಾಜ್ ಚುನಾವಣೆಯಲ್ಲಿ ಉತ್ತಮ ಪ್ರಚಾರ ಮಾಡಿ, ಒಗ್ಗಟ್ಟು ಪ್ರದರ್ಶನ ನೀಡಿದ್ದೇ ಕಾರಣ ಎಂದರು.
ಕೇಂದ್ರದ ಪ್ರತಿಯೊಂದು ಯೋಜನೆಗಳನ್ನು ಕ್ಷೇತ್ರದ ಪ್ರತಿ ಫಲಾನುಭವಿಗೆ ತಲುಪಿಸುವ ಕಾರ್ಯವನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ಮಾಡಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಡಾ.ಕೆ.ಸುಧಾಕರ್ ಛಲವಾದಿಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದಕ್ಕೆ ಕಾರಣ ಲೋಕಸಭಾ ಕ್ಷೇತ್ರದ ಜನ, ಕಾರ್ಯಕರ್ತರು, ಹಾಗೂ ನಾಯಕರು.
ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡೋಣ. ಜಿಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರನ್ನು ಗೆಲ್ಲಿಸಿಕೊಂಡು, ನೂತನ ಸಂಸದರ ಕೈಬಲಪಡಿಸೋಣ ಎಂದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ದೇವನಗುಂದಿ ನಾರಾಯಣಸ್ವಾಮಿ, ಮಾಜಿ ನಗರಸಭೆ ಅಧ್ಯಕ್ಷ ಹೇಮಂತ್ ಕುಮಾರ್, ಟೌನ್ ಬ್ಯಾಂಕ್ ಅಧ್ಯಕ್ಷ ಅಪ್ಸರ್, ಮಾಜಿ ಅಧ್ಯಕ್ಷ ಬಾಲಚಂದ್ರನ್, ನಗರಸಭೆ ಸದಸ್ಯರಾದ ನವೀನ್, ಕೆ.ದೇವರಾಜ್ ಮತ್ತಿತರರು ಇದ್ದರು.
\
ಮತ್ತೆ ಬಿಜೆಪಿ ಅಧಿಕಾರಕ್ಕೆ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಜನ ಕಿತ್ತೆಸೆದು, ಮತ್ತೆ ಬಿಜೆಪಿಗೆ ಬೆಂಬಲ ನೀಡುವ ದಿನ ಹತ್ತಿರದಲ್ಲಿದೆ. ಆ ಸಮಯದಲ್ಲಿ ಎಂಟಿಬಿ ನಾಗರಾಜ್ ಹಾಗೂ ಅವರ ಮಗ ನಿತೀಶ್ ಪುರುಷೋತ್ತಮ್ ಅವರನ್ನು ಬೆಂಬಲಿಸಿ, ಮತ್ತೆ ಅಭಿವೃದ್ಧಿ ಆಡಳಿತಕ್ಕೆ ಅನುವು ಮಾಡಿಕೊಡಿ ಎಂದು ಸಂಸದ ಡಾ.ಕೆ.ಸುಧಾಕರ್ ಮನವಿ ಮಾಡಿದರು.