

ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ 2ನೇ ಬಾರಿ ಸ್ಪರ್ಧಿಸಿದ್ದ ಬಿಜೆಪಿಯ ಎಸ್.ವಿ. ಸಂಕನೂರ ಭರ್ಜರಿ ಜಯ ಸಾಧಿಸಿದ್ದಾರೆ. 4 ಸುತ್ತುಗಳ ಮತ ಎಣಿಕೆಯಲ್ಲಿ ಸಂಕನೂರ ಪ್ರತಿ ಸುತ್ತಿನಲ್ಲೂ ಮುನ್ನಡೆ ಸಾಧಿಸುವ ಮೂಲಕ ಎದುರಾಳಿಗಳನ್ನು ಹಿಂದಿಕ್ಕಿ ಗೆಲುವಿನತ್ತ ಸಾಗಿದರು.
ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೆ ನಡೆಯಿತು. ಬೆಳಗ್ಗೆ 7.55ಕ್ಕೆ ಮತಪೆಟ್ಟಿಗೆಗಳಿದ್ದ ಸ್ಟ್ರಾಂಗ್ ರೂಂ ಅನ್ನು ಅಭ್ಯರ್ಥಿಗಳ ಸಮ್ಮುಖದಲ್ಲಿ ತೆರೆಯಲಾಯಿತು. ಆದರೆ ಮತಪತ್ರಗಳ ಬಂಡಲ್ ಮಾಡುವ ಕಾರ್ಯ 11.30ರವರೆಗೆ ನಡೆಯಿತು. ನಂತರವೇ ಮತ ಎಣಿಕೆ ಅಧಿಕೃತವಾಗಿ ಆರಂಭವಾಯಿತು. 3 ಸುತ್ತುಗಳ ಮತ ಎಣಿಕೆ ಮುಗಿಯುತ್ತಲೇ ಸಂಕನೂರ ಗೆಲುವಿನ ಸೂಚನೆ ಸಿಕ್ಕಿತ್ತು. ಆಗಲೇ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ ಆರಂಭಗೊಂಡಿತು. 4ನೇ ಸುತ್ತು ಮುಗಿದು ಚುನಾವಣಾಧಿಕಾರಿ ಫಲಿತಾಂಶ ಘೋಷಿಸುತ್ತಲೇ ಕಾರ್ಯಕರ್ತರ ಸಂಭ್ರಮ ಇಮ್ಮಡಿಗೊಂಡಿತು. ಗೆದ್ದ ನಾಯಕನಿಗೆ ಸಿಹಿ ತಿನ್ನಿಸಿ, ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.