ಬಿಜೆಪಿ, ಕಾಂಗ್ರೆಸ್ಸಿಗರು ಬಹಿರಂಗ ಚರ್ಚೆಗೆ ಬರಲಿ :ಎಚ್.ಡಿ.ದೇವೇಗೌಡ ಸವಾಲು

13
Published on

ಮೈಸೂರು: ಮೀಸಲಾತಿ ಕುರಿತು ಮಾತನಾಡುವ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ನನ್ನೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸವಾಲು ಹಾಕಿದರು.


ನಗರ ಹೊರವಲಯದ ರೆಸಾರ್ಟ್‌ನಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಸಮಾಲೋಚನಾ ಕಾರ್ಯಾಗಾರದಲ್ಲಿ ಮಾತನಾಡಿ, ಮೀಸಲಾತಿ ಕುರಿತು ಅಪಪ್ರಚಾರ ನಿಲ್ಲಿಸಿ. ಚರ್ಚೆಗೆ ನಾನು ರೆಡಿ. ಅದಕ್ಕಾಗಿ ಕಾಂಗ್ರೆಸ್, ಬಿಜೆಪಿ ನಾಯಕರು ವೇದಿಕೆ ಸಿದ್ಧ ಮಾಡಲಿ. ನಾನು ಬರುವೆ. ನನ್ನೊಂದಿಗೆ ಚರ್ಚೆಗೆ ತಯಾರಾಗಿ ಎಂದು ಪಂಥಾಹ್ವಾನ ನೀಡಿದರು.


ಪ್ರತಿಯೊಂದು ವರ್ಗವನ್ನೂ ಗುರುತಿಸಿದ ವ್ಯಕ್ತಿ ಇದ್ದರೆ ಅದು ನಾನು. ಇದು ಅಹಂಕಾರವಲ್ಲ, ಸತ್ಯ ಹೇಳಲು ಯಾರ ಮುಂದೆ ಬೇಕಾದರೂ ನಿಲ್ಲಬಲ್ಲೆ. ರಾಜ್ಯದಲ್ಲಿ ಮೊದಲಿಗೆ ಮೀಸಲಾತಿ ವ್ಯವಸ್ಥೆ ಮಾಡಿದವರು ಯಾರು? ಮುಸ್ಲಿಮರಿಗೆ ಮೀಸಲಾತಿ ಕೊಟ್ಟವರು ಕಾಂಗ್ರೆಸ್‌ನವರೋ, ಬಿಜೆಪಿಯವರೋ? ಅಂಥವರು ಶಕ್ತಿ ಇದ್ದರೆ ನನ್ನ ಮುಂದೆ ಬಂದು ನಿಲ್ಲಲಿ. ಈ ಕುರಿತು ಚರ್ಚಿಸಲು ಹೆದರಿಕೆ ಇಲ್ಲ ಎಂದು ಗುಡುಗಿದರು.


ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುವುದು ಮುಖ್ಯವಲ್ಲ. ಈ ಪಕ್ಷ ಉಳಿಯಬೇಕು ಎನ್ನುವುದು ನನ್ನ ಆಶಯ. ಅದಕ್ಕಾಗಿ ನನ್ನ ಹೋರಾಟ. ಇದನ್ನು ನಿಲ್ಲಿಸುವುದಿಲ್ಲ ಎಂದು ಆತ್ಮವಿಶ್ವಾಸದಿಂದ ಹೇಳಿದರು.


ಪಕ್ಷವನ್ನು ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿ 2023ರ ವಿಧಾನಸಭೆ ಚುನಾವಣೆಯಲ್ಲೂ ಹೋರಾಟ ಮಾಡುವ ಸಂಕಲ್ಪ ಮಾಡಿರುವೆ. ‘ಜೆಡಿಎಸ್‌ಗೆ ಬಲ ಇಲ್ಲ’ ಎಂಬ ಭಾವ ಪಕ್ಷದ ಕೆಲ ಮುಖಂಡರಲ್ಲಿ ಇದೆ, ಇದು ಬೇಡ. ಎಲ್ಲರೂ ಸೇರಿ ಐಕ್ಯತೆಯಿಂದ ಕೆಲಸ ಮಾಡೋಣ. ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಮುಖಂಡರು, ಟಿಕೆಟ್ ಆಕಾಂಕ್ಷಿಗಳಿಗೆ ಧೈರ್ಯ ತುಂಬಿದರು.


ಜೆಡಿಎಸ್ ಮುಳುಗುವ ಹಡಗೆಂದು ಕೆಲವರು ಟೀಕೆ ಮಾಡುತ್ತಾರೆ. ಅವರಿಗೆ ಹೇಗೆ ಉತ್ತರ ಕೊಡಬೇಕು ಎನ್ನುವುದು ಗೊತ್ತಿದೆ. ಮುಂದಿನ ಚುನಾವಣೆಗಾಗಿ ಎಲ್ಲರೂ ಹೋರಾಟದ ಸಂಕಲ್ಪ ಮಾಡಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬಬೇಕು ಎಂಬುದಷ್ಟೇ ಉದ್ದೇಶವಲ್ಲ. ಎಲ್ಲ ಶಕ್ತಿಯನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡಿದರೆ ಅನುಕೂಲ ಆಗುತ್ತದೆ. ಆದ್ದರಿಂದ ನಾವು ಯಾರಿಗೂ ಹೆದರಬೇಕಿಲ್ಲ ಎಂದು ಹುರಿದುಂಬಿಸಿದರು.


ಕುಮಾರಸ್ವಾಮಿ ಮಾಡಿರುವ ಕೆಲಸದ ಬಗ್ಗೆ ಮಾತನಾಡಲು ಬಹಳ ಇದೆ. ಆದರೀಗ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಅತ್ಯಂತ ಅಗತ್ಯ. ಯಾರಿಗೂ ಅನುಭವದ ಕೊರತೆ ಇಲ್ಲ. ಪ್ರತಿಯೊಬ್ಬರಲ್ಲೂ ಶಕ್ತಿ ಇದೆ. ಅದನ್ನು ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ರಾಜ್ಯದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿರುವೆ. ಅವರ ಮಾತುಗಳ ಕುರಿತು ಹಾಸ್ಯ ಮಾಡಲು ಹೋಗಲ್ಲ. ಆದರೆ, ಅವರ ನಡವಳಿಕೆ ಸರಿಯಿಲ್ಲ ಎಂದು ಟೀಕಿಸಿದರು.


ಭಾವುಕರಾದ ನಾಯಕರು:
ದೇವೇಗೌಡರು ಮಾತನಾಡುವಾಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಭಾವುಕರಾದರು. ಕೊನೆಯಲ್ಲಿ ಇಬ್ರಾಹಿಂ ಕಣ್ಣೀರು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net