

ಚಾಮರಾಜನಗರ: ಬಸವೇಶ್ವರರು ಮನುಷ್ಯ ಜಾತಿಗಳೆಲ್ಲ ಒಂದೇ ಎಂಬ ಕಲ್ಪನೆ ಮೇಲೆ ರಾಷ್ಟ್ರ ಕಟ್ಟುವ ಕೆಲಸಕ್ಕೆ ಅಡಿಪಾಯ ಹಾಕಿದರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ನಗರದ ರಾಮಸಮುದ್ರ ಕುಲುಮೆ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಜಾತಿ ಮನಸ್ಥಿತಿ ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಜೀವಂತವಾಗಿ ಇರಿಸಿದೆ. ಕೇಂದ್ರ ಸರ್ಕಾರ ದೇಶದ 140 ಕೋಟಿ ಜನರ ರಕ್ಷಣೆಯ ಜವಾಬ್ದಾರಿ ಹೊತ್ತಿದೆ. ಪಾಕಿಸ್ತಾನವನ್ನು ಹಿಮ್ಮೆಟ್ಟಿಸಲು ಸರ್ಕಾರಕ್ಕೆ ಬೆಂಬಲ ಕೊಡೋಣ ಎಂದರು.
ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು ಮಾತನಾಡಿ, ಕಾಯಕದಲ್ಲಿ ಕೈಲಾಸ ಕಾಣಬೇಕೆಂದು ತಿಳಿಸಿಕೊಟ್ಟ ಬಸವಣ್ಣ ಅಸಮಾನತೆಯನ್ನು ಕಿತ್ತೊಗೆದರು. ಜಗತ್ತಿಗೆ ಕಾಯಕ ದಾಸೋಹದ ಪರಿಕಲ್ಪನೆಯನ್ನು ತಿಳಿಸಿಕೊಟ್ಟರು ಎಂದು ಬಣ್ಣಿಸಿದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಬಾಲರಾಜ್, ಬಿಜೆಪಿ ಮುಖಂಡ ಡಾ.ಬಾಬು, ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸುಂದ್ರಪ್ಪ ಮತ್ತುಇತರರು ಹಾಜರಿದ್ದರು.