ಬಿಜೆಪಿ ಇನ್ನಾದರೂ ಧರ್ಮ ರಾಜಕಾರಣ ಬಿಡಲಿ

5
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ರಾಜ್ಯದ ಮೂರೂ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಬೆನ್ನಲ್ಲೇ ನೆಲಮಂಗಲದ ನೂರಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಶನಿವಾರ ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡು, ಪಟಾಕಿ ಸಿಡಿಸಿ, ಸಿಹಿ ಹಂಚಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.

ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ ಮಾತನಾಡಿ, ರಾಜ್ಯದ ಮೂರೂ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವು ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಹಿಡಿದ ಕನ್ನಡಿ. ಕಾಂಗ್ರೆಸ್ ಕಾರ್ಯಕರ್ತರಿಗೆ ಗೆಲುವಿನ ನಿರೀಕ್ಷೆ ಇತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದ ಫಲಿತಾಂಶ ತಲೆಕೆಳಗಾಗಿದೆ. ಜತೆಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರೇ ಚುನಾವಣೆಯಲ್ಲಿ ಸೋತಿದ್ದಾರೆ. ಇದು ರಾಜ್ಯದ ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ವಿಶ್ವಾಸ ಮತ್ತು ಬಿಜೆಪಿ ಮೈತ್ರಿಕೂಟದ ಬಗೆಗಿನ ತಿರಸ್ಕಾರಕ್ಕೆ ಸಾಕ್ಷಿ. ಇನ್ನಾದರೂ ಬಿಜೆಪಿಯು ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಬಿಟ್ಟು, ಅಭಿವೃದ್ಧಿ ಬಗ್ಗೆ ಯೋಚಿಸಲಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಜತೆಗೆ ಸರ್ಕಾರ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳು ರಾಜ್ಯದ ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಜಾತಿ ಹಾಗೂ ದ್ವೇಷದ ರಾಜಕಾರಣ ಎಂದಿಗೂ ನಡೆಯುವುದಿಲ್ಲ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.

ನೆ.ಯೊ.ಪ್ರಾಧಿಕಾರ ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ನಗರಸಭೆ ಸದಸ್ಯರಾದ ಸಿ.ಪ್ರದೀಪ್, ನರಸಿಂಹಮೂರ್ತಿ, ಪುರುಷೋತ್ತಮ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಎಂ.ಗೌಡ, ಯೂತ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ್‌ಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಾಗರತ್ನಮ್ಮ, ಗ್ರಾಪಂ ಸದಸ್ಯ ಯಲಚಗೆರೆ ಹನುಮಂತರಾಜು, ಮಂಜುನಾಥಯ್ಯ, ಸಲೀಂಪಾಷಾ, ಮಾಜಿ ಅಧ್ಯಕ್ಷ ಶೈಲೇಂದ್ರ, ಮಾಜಿ ಸದಸ್ಯೆ ಹನುಮಂತಮ್ಮ, ಮುಖಂಡರಾದ ತಟ್ಟೆಕೆರೆಬಾಬು, ಮುನಿಯಪ್ಪ, ರವಿಕುಮಾರ್, ಮಧುಕುಮಾರ್, ಮನುಕುಮಾರ್, ವಿಜಯ್‌ಕುಮಾರ್, ಗಂಗರಾಜು, ಬೈಲಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net