ಬಳ್ಳಾರಿ : ಮೈಸೂರಿನ ಮುಡಾ ಹಗರಣದ ವಿಷಯದಲ್ಲಿ ಬಿಜೆಪಿ ಆರೋಪ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳಕರ್ ಹೇಳಿದರುನಗರದ ವಾಲ್ಮೀಕಿ ಭವನದಲ್ಲಿ ಡಿಎಂಎಫ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ರೆಫ್ರಿಜರೇಟರ್ ಹಾಗೂ ವಿಕಲಚೇತನರ ತ್ರಿಚಕ್ರ ವಾಹನಗಳು ಮತ್ತು ಪೋಷಣ ಅಭಿಯಾನ ಯೋಜನೆಯಡಿ ಸ್ಮಾರ್ಟಫೋನ್ ಮತ್ತು ವಿವಿಧ ಪರಿಕರಗಳ ವಿತರಣೆ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯ ಎಲ್ಲ ಆರೋಪಕ್ಕೆ ಉತ್ತರ ಕೊಡಲು ಆಗುವುದಿಲ್ಲ. ಬೆಳಗಾವಿಯ ಕಾಂಗ್ರೆಸ್‌ನಲ್ಲಿ ಯಾವುದೇ ಒಡಕಿಲ್ಲ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಂತರ ಕಡಿಮೆಯಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಹಾಗೂ ಸತೀಶ್ ಜಾರಕಿಹೊಳಿ ಇಬ್ಬರನ್ನು ವೈಯಕ್ತಿಕವಾಗಿ ಭೇಟಿಯಾಗಿ ಬಹಿರಂಗವಾಗಿ ಯಾರ ವಿರುದ್ಧ ಮಾತನಾಡುವುದು ಬೇಡ ಎಂದಿರುವೆ ಎಂದರು. ಸಿಎಂ ಸಿದ್ದರಾಮಯ್ಯ ಅವರು 2013ರಿಂದ ಎಸ್‌ಸಿ ಹಾಗೂ ಎಸ್‌ಟಿ ಅತಿ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಅವಧಿಯಲ್ಲಿ ಅತಿ ಹೆಚ್ಚು ಅನುದಾನ ಕಡಿತವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಬಳಕೆ ಮಾಡುತ್ತವೆ ಅಂದರೆ ಅದರಲ್ಲೂ ಎಸ್‌ಸಿ, ಎಸ್‌ಟಿ ಸಮುದಾಯವಿದೆ. ಗ್ಯಾರಂಟಿ ಹಣ ಕೆಲವರಿಗೆ ಬಂದಿಲ್ಲ ಅಂದರೂ ಕೂಡ ಕಾಂಗ್ರೆಸ್ ಸರ್ಕಾರ ಎಸ್‌ಸಿ ಹಾಗೂ ಎಸ್‌ಟಿಗೆ ಅದ್ಯತೆ ನೀಡಿ ಹಣ ಹಾಕಲಾಗಿದೆ. ಮೇ ತಿಂಗಳಲ್ಲಿ ಕೊನೆಯದಾಗಿ ಗ್ಯಾರಂಟಿ ಹಣ ಹಾಕಲಾಗಿದೆ. ಜೂನ್ ಹಾಗೂ ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಬಂದಿಲ್ಲ. ಕೆಲವೇ ದಿನಗಳಲ್ಲಿ ಡಿಬಿಟಿ ಮೂಲಕ ಜಮೆ ಮಾಡಲಾಗುವುದು. ಅಂಗನವಾಡಿಗಳಿಗೆ ಮೊಟ್ಟೆ ವಿತರಣೆ ಹಣ ಸರ್ಕಾರ ನೀಡಲು ವಿಳಂಬಕ್ಕೆ ನಾನಾ ಕಾರಣಗಳಿವೆ. ಮಾರುಕಟ್ಟೆ ದರ ಮತ್ತು ಸರ್ಕಾರ ಕೊಡುವ ದರದಲ್ಲಿ ವ್ಯತ್ಯಾಸವಿದೆ. ಇದರಲ್ಲಿ ಸಾರಿಗೆ ದರದ ವಿಚಾರ ಸೇರಿಕೊಂಡಿದ್ದು, ಸ್ವಲ್ಪ ಗೊಂದಲವಿದೆ. ಡಿಡಿ ಮತ್ತು ಸಿಡಿಪಿಒ ಅಧಿಕಾರಿಗಳ ಸಭೆ ಕರೆದು ಗೊಂದಲ ಬಗೆಹರಿಸಲಾಗುವುದು. ಅಂಗನವಾಡಿಗಳ ಹೆಸರು ಬದಲಾವಣೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಅಪ್‌ಗ್ರೇಡ್ ಮೂಲಕ ಹೆಸರು ಬದಲಾವಣೆ ಮಾಡಲಾಗುವುದು. ಅಂಗನವಾಡಿಗಳಲ್ಲಿ ಪದವಿ, ಸ್ನಾತಕೊತ್ತರ ಪದವೀಧರರು ಇದ್ದು, ಸರ್ಕಾರಿ ಮಾಂಟೆಸರಿ ಮಾಡಬೇಕು ಅಂತಾ ತೀರ್ಮಾನಿಸಲಾಗಿದ್ದು, ಸಿಎಂ ಕೂಡ ಬೆಂಬಲ ಸೂಚಿಸಿದ್ದಾರೆ. ಆರಂಭದಲ್ಲಿ 7000 ಅಂಗನವಾಡಿಗಳನ್ನು ಅಪ್‌ಗ್ರೇಡ್ ಮಾಡಲಾಗುವುದು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಅಭಿವೃದ್ಧಿ ಮಾಡಲಾಗುವುದು. ಸಿಎಂ ಹಾಗೂ ಡಿಸಿಎಂ ಬದಲಾವಣೆ ಚರ್ಚೆಯಲ್ಲಿ ನಾನಿಲ್ಲ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿದರು. ಶಾಸಕರಾದ ನಾರಾಭರತರೆಡ್ಡಿ, ಜೆ.ಎನ್.ಗಣೇಶ, ಮೇಯರ್ ಮುಲ್ಲಂಗಿ ನಂದೀಶ್, ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ ಇದ್ದರು.