

ದಾವಣಗೆರೆ: ದಾವಣಗೆರೆಯನ್ನು ಈ ಹಿಂದೆ ಸ್ಮಾರ್ಟ್‌ಸಿಟಿಗೆ ನಾವೇ ಸೇರ್ಪಡೆ ಮಾಡಿದ್ದೆವು. ಆಗ ನಗರ 9ನೇ ಸ್ಥಾನ ಗಳಿಸಿತ್ತು. ಬಿಜೆಪಿ ಅವಧಿಯಲ್ಲಿ ಸಿಕ್ಕಿಹಾಕಿಕೊಂಡು ಅದ್ವಾನವಾಗಿದೆ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಆರೋಪಿಸಿದರು.
ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನ, ಲಯನ್ಸ್ ಕ್ಲಬ್ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಸಹಯೋಗದಲ್ಲಿ ನಗರದ ಲಯನ್ಸ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಮ್ಮ ಅವಧಿಯಲ್ಲಾದ ಅಭಿವೃದ್ಧಿ, ಕಳೆದ ಐದು ವರ್ಷದಲ್ಲಿ ಬಿಜೆಪಿಗರು ಮಾಡಲಿಲ್ಲ. ಬಿಜೆಪಿ ಸರ್ಕಾರ ಶೇ.40ರಿಂದ 50ರಷ್ಟು ಕಮೀಷನ್ ಪಡೆದು ಕಾಮಗಾರಿಗಳನ್ನು ಹಾಳುಗೆಡವಿದೆ. ಇದನ್ನು ಸರಿಪಡಿಸಲು ನಮಗೆ ಐದು ವರ್ಷ ಸಮಯ ಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರವನ್ನು ಮತ್ತೆ ಅಭಿವೃದ್ಧಿ ಮಾಡಬೇಕಿದೆ. ಜಿಲ್ಲೆಯಲ್ಲೂ ಸಹ ಅಗತ್ಯ ಕಾರ್ಯಕ್ರಮ ರೂಪಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಜೂ. 21ರಂದು ಸನ್ಮಾನ ಹಿನ್ನೆಲೆಯಲ್ಲಿ ಸಂಪುಟದ ಎಲ್ಲ ಸಚಿವರನ್ನು ದೆಹಲಿಗೆ ಹೋಗಲು ಬುಲಾವ್ ಬಂದಿದೆ. ಹೀಗಾಗಿ ಈ ಬಾರಿಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲು ಆಗದು. ಮುಂದಿನ ವರ್ಷ ದಾವಣಗೆರೆಯಲ್ಲಿ ಯೋಗ ದಿನಾಚರಣೆಯ ದಶಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು.
ಜಿಲ್ಲಾ ಯೋಗ ಒಕ್ಕೂಟದ ಗೌರವಾಧ್ಯಕ್ಷ ಬಿ.ಸಿ.ಉಮಾಪತಿ ಮಾತನಾಡಿ ದಾವಣಗೆರೆಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರನ್ನು ಕರೆಸುವ ಉದ್ದೇಶವಿತ್ತು. ಅಂದು ಅವರು ಹಾಜರಾಗುತ್ತಿಲ್ಲ. ಮುಂದಿನ ಬಾರಿಯಾದರೂ ರಾಜ್ಯ ಮಟ್ಟದ ಯೋಗ ಕಾರ್ಯಕ್ರಮ ನಗರದಲ್ಲಿ ಆಗಲು ಸಚಿವರು ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಅನ್ನಪೂರ್ಣೇಶ್ವರಿ ದೇವಸ್ಥಾನ ಆರಂಭವಾದ 25 ವರ್ಷದಲ್ಲಿ ಎತ್ತರಕ್ಕೆ ಬೆಳೆದಿದೆ. ಭಕ್ತರ ಸಂಖ್ಯೆಯೂ ಹೆಚ್ಚಿದೆ. ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸಲಾಗುತ್ತಿದೆ. ದೇವಸ್ಥಾನ ಸಮೀಪದ ಜಾಗವನ್ನು ಕ್ರಯಕ್ಕೆ ಕೊಡಿಸಬೇಕೆಂದು ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್ ಸಚಿವರಲ್ಲಿ ಕೋರಿದರು.
ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರನ್ನು ಸನ್ಮಾನಿಸಲಾಯಿತು. ಬಾಲ ಯೋಗ ಪಟುಗಳಾದ ನಮಿತಾ, ಪ್ರಭು, ಸೃಷ್ಟಿ ಹಾಗೂ ಮಲ್ಲಿಕಾರ್ಜುನ ಮಾಳಿಗೇರ ವಿವಿಧ ಯೋಗ ಭಂಗಿಗಳೊಂದಿಗೆ ಯೋಗ ನೃತ್ಯ ಮಾಡಿ ಗಮನ ಸೆಳೆದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರಕಾಶ್ ಪಾಟೀಲ್, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಆರ್. ನಾಗಭೂಷಣರಾವ್, ಪಾಲಿಕೆ ಸದಸ್ಯೆ ಆಶಾ ಉಮೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ್ರು, ಯು. ಸಿದ್ದೇಶಿ, ತಾತಾ ವೆಂಕಟಾಚಲಪತಿ ಶ್ರೇಷ್ಠಿ, ಪ್ರಭಾ ರವೀಂದ್ರ, ನಾಗಭೂಷಣ್ ಕಡೇಕೊಪ್ಪ ಇತರರಿದ್ದರು.