ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ

18kgl1
ಕೊಳ್ಳೇಗಾಲ ಪಟ್ಟಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಗರಸಭೆ ಉಪಚುನಾವಣೆಯ ಸಂಘಟನಾ ಪೂರ್ವಭಾವಿ ಸಭೆ ನಡೆಯಿತು. ಮೈ.ವಿ.ರವಿಶಂಕರ್, ಎನ್.ಮಹೇಶ್, ನಾಗಶ್ರೀ ಪ್ರತಾಪ್, ಲಕ್ಷ್ಮೀಪತಿ, ನಾರಾಯಣ ಪ್ರಸಾದ್ ಇದ್ದರು.
Published on

ಕೊಳ್ಳೇಗಾಲ: ಅ.28ರಂದು ನಡೆಯಲಿರುವ ಕೊಳ್ಳೇಗಾಲ ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ಬಿಜೆಪಿ ಸಂಘಟನಾ ವಿಭಾಗದ ಪ್ರಭಾರಿ ಮೈ.ವಿ.ರವಿಶಂಕರ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ನಗರಸಭೆ ಉಪಚುನಾವಣೆ ಸಂಘಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಪಕ್ಷಕ್ಕೆ ಈ ಹಿಂದೆ ಬೆಂಬಲ ನೀಡಿ ಅನರ್ಹ ಸದಸ್ಯರಾಗಿದ್ದ 7 ಜನರಿಗೂ ಇದೀಗ ಉಪಚುನಾವಣೆಯಲ್ಲಿ ಬಿಜೆಪಿ ನೈತಿಕ ಬದ್ಧತೆ ಹೊತ್ತು ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಇವರಿಗೆ ಸಹಕಾರ ನೀಡಿ ಗೆಲ್ಲಿಸಬೇಕು ಎಂದರು.

ಉಪಚುನಾವಣೆ ಘೋಷಣೆಯಾಗಿರುವ ವಾರ್ಡ್‌ಗಳಲ್ಲೂ ಮೂಲ ಬಿಜೆಪಿ ಅಕಾಂಕ್ಷಿಗಳಿದ್ದರು. ಆದರೆ ಈ ಸಂದರ್ಭವನ್ನು ಅರ್ಥ ಮಾಡಿಕೊಂಡು ಪಕ್ಷದ ಸಿದ್ಧತೆಗೆ ತಲೆಬಾಗಿ ಬಿಜೆಪಿ ಅಮೋಘ ಗೆಲುವು ಸಾಧಿಸಲು ನೆರವಾಗಬೇಕು. 7 ವಾರ್ಡ್‌ಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಶಾಸಕ ಎನ್.ಮಹೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಮುಂದಿಟ್ಟುಕೊಂಡು ಕಾರ್ಯಕರ್ತರ ಮತಯಾಚನೆ ಶುರು ಮಾಡಬೇಕಿದೆ. ಎಲ್ಲ ವಾರ್ಡ್‌ಗಳಿಗೂ ಉಸ್ತುವಾರಿ ನೇಮಿಸಿದ್ದು, ಅವರ ಮಾರ್ಗದರ್ಶನ ಪಡೆಯಬೇಕು. ನಾಮ ನಿರ್ದೇಶಿತ ಸದಸ್ಯರನ್ನು ಚುನಾವಣೆ ಕೆಲಸಕ್ಕೆ ಬಳಸಿಕೊಳ್ಳಿ. ಅಭ್ಯರ್ಥಿಗಳು ಎಲ್ಲ ಜನರ ವಿಶ್ವಾಸವನ್ನು ಗಳಿಸಿಕೊಂಡು ಮತಯಾಚನೆ ಮಾಡಿ ಎಂದು ಸಲಹೆ ನೀಡಿದರು.

ಮಂಗಳವಾರ ನಾಮಪತ್ರ ಪರಿಶೀಲನೆ ಮುಗಿದಿದೆ. ಅ.20ರ ಬಳಿಕ ಚುನಾವಣಾ ಪ್ರಚಾರ ಪ್ರಾರಂಭಿಸಿ ಪ್ರತಿ ಮನೆ ಮನೆಗೂ ತೆರಳಿ ಅಭ್ಯರ್ಥಿಗಳು ಮತಯಾಚನೆ ಮಾಡಿ ಎಂದು ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪ್ರಸಾದ್, ಚುನಾವಣಾ ಉಸ್ತುವಾರಿ ಜಿ.ಪಂ. ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್, ಬಿಜೆಪಿ ಜಿಲ್ಲಾ ವಕ್ತಾರ ಬಸವರಾಜಪ್ಪ, ನಗರ ಮಂಡಲದ ಅಧ್ಯಕ್ಷ ಲಕ್ಷ್ಮೀಪತಿ, ಒಬಿಸಿ ಜಿಲ್ಲಾ ಅಧ್ಯಕ್ಷ ನಟರಾಜೇಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಧ್ಯಕ್ಷ ಪ್ರಣಯ್, ಬಿಜೆಪಿ ಅಭ್ಯರ್ಥಿಗಳಾದ ಮಾನಸ, ಪವಿತ್ರ, ನಾಗಸುಂದ್ರಮ್ಮ, ನಾಗಮಣಿ, ಪ್ರಕಾಶ್, ನಾಸೀರ್ ಶರೀಫ್, ರಾಮಕೃಷ್ಣ ಹಾಗೂ ಮುಖಂಡರು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net