ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ | ಚನ್ನಮ್ಮ ಪಾಟೀಲ ಹೇಳಿಕೆ

blg-20-1
ಬೀಳಗಿ ಕ್ರಾಸ್‌ನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಹಾಗೂ ಬೀಳಗಿ ಘಟಕದಿಂದ ಹಮ್ಮಿಕೊಂಡ ಮಹಿಳಾ ದಿನಾಚರಣೆ, ಸಮಾವೇಶ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಚನ್ನಮ್ಮ ಪಾಟೀಲ, ಕಮಲಾ ನಿರಾಣಿ, ಶರಮ್ಮ ಕಾಮರಡ್ಡಿ, ಹಣಮಂತ ನಿರಾಣಿ ಇತರರಿದ್ದರು.
Published on

ಬೀಳಗಿ: ಬಿಜೆಪಿಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡುವುದರ ಜೊತೆಗೆ ಅಪಾರವಾದ ಗೌರವ ನೀಡಲಾಗುತ್ತದೆ. ಮಹಿಳೆಯರ ಸಬಲೀಕರಣಕ್ಕಾಗಿ ಪ್ರಧಾನಿ ಮೋದಿ ಅನೇಕ ಜನಪರವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಮ್ಮ ಪಾಟೀಲ ಹೇಳಿದರು.

ಪಟ್ಟಣದ ಬೀಳಗಿ ಕ್ರಾಸ್ ನಿರಾಣಿ ಅವರ ಮಲ್ಲಿಕಾರ್ಜುನ ನಿಲಯ ಹತ್ತಿರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಮತ್ತು ಬೀಳಗಿ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ, ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ತ್ರೀಯರ ಏಳಿಗೆಗಾಗಿ ಮನೆ ಮನೆಗೆ ಗ್ಯಾಸ್, ಗಂಗಾಜಲ, ಜನಧನ ಖಾತೆ, ಸುಕನ್ಯಾ ಸಮೃದ್ಧಿ ಯೋಜನೆ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೇರಿ ಅನೇಕ ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ನೀಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಬೇಕಾಗಿದೆ. ಬಾಗಲಕೋಟೆ ಜಿಲ್ಲೆಯ 7 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಾವೆಲ್ಲರೂ ಮುಂದಾಗಬೇಕಾಗಿದೆ. ಬೀಳಗಿ ಮತಕ್ಷೇತ್ರದಲ್ಲಿ ಮತ್ತೆ ನಿರಾಣಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದಾರೆ. ಈ ಸಲ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಶಾಸಕರನ್ನಾಗಿಸಿ ಮುಖ್ಯಮಂತ್ರಿಯನ್ನಾಗಿ ಮಾಡಲು ಸಂಕಲ್ಪ ತೊಡಬೇಕಾಗಿದೆ ಎಂದರು.

ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶರಮ್ಮ ಕಾಮರಡ್ಡಿ ಮಾತನಾಡಿ, ಸಚಿವ ಮುರುಗೇಶ ನಿರಾಣಿ ಅವರು ಬೀಳಗಿ ಮತಕ್ಷೇತ್ರ ಅಲ್ಲದೆ, ರಾಜ್ಯದ ಎಲ್ಲೆಡೆ ತಮ್ಮ ಕೊಡುಗೆ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿಯೊಬ್ಬ ಮತದಾರರ ಮನೆ ಮನೆಗೆ ತಿಳಿಸಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಬೇಕಾದ್ದನ್ನು ಸಾಧಿಸಬಲ್ಲರು. ಬಾಗಲಕೋಟೆ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಅರಳಬೇಕಾಗಿದೆ. ತಾಯಂದಿರ ಆಶೀರ್ವಾದ ಬಹಳ ಮುಖ್ಯವಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ತಮ್ಮ ಸಂಬಂಧಿಕರು ಹಾಗೂ ಮನೆಯ ಅಕ್ಕಪಕ್ಕದವರಿಗೆ ಮನವರಿಕೆ ಮಾಡಿ ಬಿಜೆಪಿ ಗುರುತಿಗೆ ಹೆಚ್ಚಿನ ಮತಗಳು ಬರುವಂತೆ ನೋಡಿಕೊಳ್ಳಬೇಕು ಎಂದರು.

ಕಮಲಾ ನಿರಾಣಿ ಮಾತನಾಡಿ, ಸಚಿವ ಮುರುಗೇಶ ನಿರಾಣಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಿದ್ದಾರೆ. ಅವರ ಕೈ ಬಲಪಡಿಸಲು ಮತ ನೀಡಿ ಆಶೀರ್ವಾದ ಮಾಡಬೇಕು ಎಂದರು.

ಪ್ರೇಮಕ್ಕ ಅಂಗಡಿ ಮಾತನಾಡಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸವಿತಾ ಹೊಸೂರ, ತಾಲೂಕು ಘಟಕದ ಅಧ್ಯಕ್ಷೆ ಮಹಾದೇವಿ ಮೈಸೂರ, ವಿಜಯಲಕ್ಷ್ಮೀ ಹುಕುಮನಾಳ, ಗೌರಮ್ಮ ಸಂಕಿನಮಠ, ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ಮಂಡಳ ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ವಿಜಯಲಕ್ಷ್ಮೀ ಪಾಟೀಲ, ಕಾವೇರಿ ರಾಠೋಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net