ಬಿಜೆಪಿ ಅಭ್ಯರ್ಥಿ ಕೃಷ್ಣನಾಯಕ ನಾಮಪತ್ರ ಸಲ್ಲಿಕೆ

19hdk 03
Published on

ಎಚ್.ಡಿ.ಕೋಟೆ: ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಬುಧವಾರ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಮೊದಲಿಗೆ ಸರಗೂರು ತಾಲೂಕಿನ ಚಿಕ್ಕದೇವಮ್ಮ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಎಚ್.ಡಿ.ಕೋಟೆ ಪಟ್ಟಣದ ಗದ್ದಿಗೆ ಸರ್ಕಲ್ ಸಮೀಪದ ಬಣ್ಣಾರಿಯಮ್ಮನ ದೇವಸ್ಥಾನದ ಆವರಣದಿಂದ ಅಲಂಕೃತ ತೆರೆದ ವಾಹನದಲ್ಲಿ ನಾದಸ್ವರ, ಕೀಲು ಗೊಂಬೆ, ವೀರಗಾಸೆ, ಪೂಜಾ ಕುಣಿತ, ನಗಾರಿ, ತಮಟೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಹಾಗೂ ಬೈಕ್ ರ‌್ಯಾಲಿ ಮೂಲಕ ಮೆರವಣಿಗೆ ಮೂಲಕ ಸಾಗಿಬಂದರು. ದಾರಿ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಅಲ್ಲಲ್ಲಿ ಪಟಾಕಿ ಸಿಡಿಸಿ, ಪಕ್ಷ ಹಾಗೂ ಬಿಜೆಪಿ ನಾಯಕರ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದರು. ಬಾಪೂಜಿ ವೃತ್ತಕ್ಕೆ ತೆರೆದ ವಾಹನದಲ್ಲಿ ಕೃಷ್ಣನಾಯಕ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಿದರು.

ಮೆರವಣಿಗೆಯಲ್ಲಿ ಬಹುತೇಕ ಕಾರ್ಯಕರ್ತರು ಪಕ್ಷದ ಶಲ್ಯ, ಟೋಪಿ, ಧ್ವಜವನ್ನು ಹಿಡಿದು, ಬಿಜೆಪಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಚಿತ್ರ ನಟ ಸುದೀಪ್ ಹಾಗೂ ಅಭ್ಯರ್ಥಿ ಕೃಷ್ಣನಾಯಕರ ಭಾವಚಿತ್ರ ಇದ್ದ ಫ್ಲೆಕ್ಸ್ ಹಿಡಿದು ಗಮನ ಸೆಳೆದರು.

ಆಡಳಿತಸೌಧದಲ್ಲಿ ಚುನಾವಣಾ ಅಧಿಕಾರಿ ಕುಮುದಾ ಶರತ್ ಅವರಿಗೆ ಕೃಷ್ಣನಾಯಕ ನಾಮಪತ್ರ ಸಲ್ಲಿಸಿದರು. ಪತ್ನಿ ಸರಸ್ವತಿ, ಬಿಜೆಪಿ ಮುಖಂಡರಾದ ಎಂ.ಅಪ್ಪಣ್ಣ, ಡಾ.ಕೃಷ್ಣಸ್ವಾಮಿ, ರಾಜೇಂದ್ರ, ಮಂಗಳಾ ಸೋಮಶೇಖರ್, ಎಚ್.ಸಿ.ಲಕ್ಷ್ಮಣ್, ಮೊತ್ತ ಬಸವರಾಜಪ್ಪ, ಸಿ.ವಿ.ನಾಗರಾಜು ಸಾಥ್ ನೀಡಿದರು.

ಜಯಭೇರಿ ಖಚಿತ: ನಾಮಪತ್ರ ಸಲ್ಲಿಸಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣನಾಯಕ, ಈ ಬಾರಿ ಬಿಜೆಪಿ ಜಯಭೇರಿ ಖಚಿತ. ತಾಲೂಕಿನ ಪ್ರಮುಖ ನಾಯಕರಾದ ಅಪ್ಪಣ್ಣ, ಕೃಷ್ಣಸ್ವಾಮಿ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪಕ್ಷದವರು ನನ್ನ ಸೇವಾ ಚಟುವಟಿಕೆಗಳನ್ನು ಗುರುತಿಸಿದ್ದಾರೆ. ತಾಲೂಕಿನ ಜನರು ನನ್ನನ್ನು ಆಶೀರ್ವದಿಸಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net