ಬಿಜಿಎಂಎಲ್ ಒಡೆತನದ ಖಾಲಿ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ

29-klr-6
Published on

ಕೆಜಿಎಫ್: ಬಿಜಿಎಂಎಲ್ ಒಡೆತನದ ಖಾಲಿ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಚಿಂತನೆ ನಡೆಸಿದ್ದು, ನೈಸರ್ಗಿಕ ಸಂಪತ್ತು ಲಭ್ಯತೆಯ ಸರ್ವೇ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಬಿಜಿಎಂಎಲ್ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 3200 ಎಕರೆಯಷ್ಟು ಜಾಗ ಗಣಿಗಾರಿಕೆ ನಡೆಸದೆ ಖಾಲಿಯಿದೆ. ಈ ಭಾಗದಲ್ಲಿ ಚಿನ್ನ ಇನ್ನಿತರ ನೈಸರ್ಗಿಕ ಸಂಪತ್ತು ಇದೆಯೇ ಎಂಬ ಬಗ್ಗೆ ಸರ್ವೇ ನಡೆಸಲು ಎಂಇಸಿಎಲ್ ಅಧಿಕಾರಿಗಳಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಜತೆಗೆ ಶುಕ್ರವಾರ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿದೆ. ವರದಿ ಬರಲು 6 ತಿಂಗಳು ಬೇಕಾಗಬಹುದು. ನೈಸರ್ಗಿಕ ಸಂಪತ್ತು ಲಭ್ಯತೆ ಇಲ್ಲದಿದ್ದಲ್ಲಿ ಈ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗೆ ಬಳಸಲಾಗುವುದು ಎಂದರು.

ರಕ್ಷಣಾ ಸಚಿವರೊಂದಿಗೆ ಚರ್ಚೆ: ಬಿಜಿಎಂಎಲ್‌ಗೆ 12,000 ಎಕರೆ ನೀಡಲಾಗಿತ್ತು, ಇದರಲ್ಲಿ 3200 ಎಕರೆ ಬಳಸದೆ ಉಳಿದಿದೆ. ಇದರ ಜತೆಗೆ ಬಿಇಎಂಎಲ್‌ಗೆ ನೀಡಿರುವ 973 ಎಕರೆ ಭೂಮಿಯ ಗುತ್ತಿಗೆ ಅವಧಿ ಮುಗಿದಿದ್ದು, ಸರ್ಕಾರ ವಶಕ್ಕೆ ಪಡೆದು ಕೆಐಡಿಬಿಯಿಂದ ಅಭಿವೃದ್ಧಿಪಡಿಸುವ ಸಂಬಂಧ ಮುಂದಿನ ತಿಂಗಳು ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗುವುದು. ಕೆಜಿಎಫ್‌ಗೆ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಪೂರಕ ಉತ್ಪನ್ನಗಳ ಕೈಗಾರಿಕಾ ತರುವ ಚಿಂತನೆಯೂ ಇದೆ ಎಂದು ನುಡಿದರು.

ರಾಜ್ಯದ ನೂತನ ಕೈಗಾರಿಕಾ ನೀತಿಯಲ್ಲಿ 2ನೇ ಹಾಗೂ 3ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಲು ಒತ್ತು ನೀಡಿದ್ದೇವೆ. ದೇಶದ ಯಾವುದೇ ರಾಜ್ಯಗಳೂ ನೀಡದೇ ಇರುವಂತಹ ಅನುಕೂಲತೆಗಳನ್ನು ನಮ್ಮ ನೀತಿಯಲ್ಲಿ ನೀಡಿದ್ದು, ರಾಜ್ಯವನ್ನು ನಂ1 ಕೈಗಾರಿಕಾಸ್ನೇಹಿ ರಾಜ್ಯವನ್ನಾಗಿಸುವುದು ನಮ್ಮ ಗುರಿಯಾಗಿದೆ ಎಂದರು.

70ರಷ್ಟು ಹುದ್ದೆ ಸ್ಥಳೀಯರಿಗೆ: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕೆಗಳ ಒತ್ತಡ ಹೆಚ್ಚಿರುವುದರಿಂದ ನೂತನ ಕೈಗಾರಿಕಾ ನೀತಿಯನ್ವಯ ಟಯರ್ 2, ಟಯರ್ 3 ನಗರಗಳಲ್ಲಿ ಕೈಗಾರಿಕಾ ಬೆಳವಣಿಗೆಗೆ ಕ್ರಮ ವಹಿಸಲಾಗುತ್ತಿದೆ. ಕೈಗಾರಿಕೆಯಲ್ಲಿ ಟೆಕ್ನಿಕಲ್ ಹುದ್ದೆಗಳಲ್ಲಿ ಶೇ.70 ಹಾಗೂ ಉಳಿದ ಹುದ್ದೆಗಳಲ್ಲಿ ಶೇ.100 ಹುದ್ದೆಗಳನ್ನು ಸ್ಥಳೀಯರಿಗೆ ನೀಡಲಾಗುವುದು. ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಈ ಭಾಗದಲ್ಲಿ ಹಾದುಹೋಗುತ್ತಿದ್ದು, ವಿಮಾನ ನಿಲ್ದಾಣ, ಬಂದರು ಸಮೀಪದಲ್ಲಿರುವುದರಿಂದ ಜಿಲ್ಲೆ ಕೈಗಾರಿಕಾಭಿವೃದ್ಧಿಗೆ ಸೂಕ್ತ ಜಾಗವಾಗಿದೆ ಎಂದರು.

ಅಧಿಕಾರಿಗಳ ವಿರುದ್ಧ ಶಾಸಕಿ ಗರಂ: ಸಚಿವ ಜಗದೀಶ್‌ಶೆಟ್ಟರ್ ಅವರು ಒಂದು ಉತ್ತಮ ಚಿಂತನೆಯೊಂದಿಗೆ ಸ್ಥಳ ಕ್ಷಣೆಗಾಗಿ ಬಂದಂತಹ ಸಂದರ್ಭದಲ್ಲಿ ಒಳ್ಳೆಯ ಊಟವನ್ನು ನೀಡಲು ಸಾಧ್ಯವಾಗಲಿಲ್ಲ ಅಂದರೆ ಹೇಗೆ ಎಂದು ಬಿಇಎಂಎಲ್ ಅತಿಥಿ ಗೃಹದ ಸ್ವಾಗತಕಾರರ ಕೊಠಡಿ ಬಳಿ ಅಧಿಕಾರಿಗಳ ವಿರುದ್ಧ ಶಾಸಕಿ ರೂಪಕಲಾ ಗರಂ ಆದರು.

ಸೈನೈಡ್ ದಿಬ್ಬ ಹತ್ತಿದ ಸಚಿವ: ಸ್ಥಳ ವೀಕ್ಷಣೆ ಮಾಡಲು ಆಗಮಿಸಿದ್ದ ಸಚಿವರು ಬಿಇಎಂಎಲ್ ಕಾರ್ಮಿಕರ ಮನೆಗಳನ್ನು ವೀಕ್ಷಣೆ ಮಾಡಿ ನೇರವಾಗಿ ಆಶೋಕನಗರ ಬಿಜಿಎಂಎಲ್ ಸೈನೈಡ್ ದಿಬ್ಬಗಳ ವೀಕ್ಷಣೆ ಮಾಡಲು ಆಗಮಿಸಿದರು. ಆದರೆ ದಿಬ್ಬದ ಮೇಲೆ ಸಚಿವರ ವಾಹನ ತೆರಳಲು ಸಾಧ್ಯವಾಗದಿದ್ದರಿಂದ ಸಚಿವರು ಹಾಗೂ ಸಂಸದ ಮುನಿಸ್ವಾಮಿ ಪೊಲೀಸ್ ವಾಹನ ಹತ್ತಿ ಸೈನೈಡ್ ದಿಬ್ಬ ವೀಕ್ಷಣೆ ಮಾಡಿದರು.

ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು: ಜಿಲ್ಲೆಯಿಂದ ಸುಮಾರು 25,000 ಜನರು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಬಿಜಿಎಂಎಲ್‌ನಲ್ಲಿ ಖನಿಜಗಳು ಸಿಗುವ ಸ್ಥಳ ಹೊರತುಪಡಿಸಿ ಉಳಿದ ಸ್ಥಳಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಜಿಲ್ಲೆಯಲ್ಲಿ 4,000 ಎಕರೆಯನ್ನು ಕೆಐಡಿಎಬಿಗೆ ಹಸ್ತಾಂತರಿಸಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ದೇಶದಲ್ಲಿಯೇ ವಸ್ತುಗಳನ್ನು ಉತ್ಪಾದಿಸಲು ಕೈಗಾರಿಕೆ ಸ್ಥಾಪಿಸಲಾಗುತ್ತಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಬೆಳಗಾವಿಯಲ್ಲಿ ಶಾಂತಿ ಕದಡಿಲ್ಲ: ಬೆಳಗಾವಿಯಲ್ಲಿ ಶಾಂತಿ ವಾತಾವರಣ ಕದಡಿಲ್ಲ. ಎಲ್ಲಿ ಶಾಂತಿ ಕದಡಿದೆ ಎಂದು ಸಚಿವ ಜಗದೀಶ ಶೆಟ್ಟರ್ ಪ್ರಶ್ನಿಸಿದರಲ್ಲದೆ ಅಶಾಂತಿ ವಾತಾವರಣದ ಕುರಿತು ವಿವರಿಸಲು ಯತ್ನಿಸಿದ ಮಾಧ್ಯಮದವರ ಮಾತನ್ನು ಆಲಿಸದೆ ನಿರ್ಗಮಿಸಿದರು.

ಇದಕ್ಕೂ ಮುನ್ನ ಸಚಿವರು ಬಿಜಿಎಂಎಲ್‌ನ ಸ್ಥಳ ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಶಾಸಕಿ ಎಂ.ರೂಪಕಲಾ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಕೆಐಎಡಿಬಿ ಸಿಇಒ ಶಿವಶಂಕರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ, ಜಿಪಂ ಸದಸ್ಯರಾದ ಅಶ್ವಿನಿ ಸಂಪಂಗಿ, ಬಿ.ವಿ ಮಹೇಶ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಸುರೇಶ್, ಉಪ ನಿರ್ದೇಶಕ ಎನ್.ರವಿಚಂದ್ರ, ಮಾಜಿ ಶಾಸಕರಾದ ವೈ.ಸಂಪಂಗಿ, ಬಿ.ಪಿ.ವೆಂಕಟಮುನಿಯಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net