

ಬೇಲೂರು : ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಬೇಕೆಂಬ ಉದ್ದೇಶದಿಂದ ಪ್ರತಿ ಹೋಬಳಿ ಕೇಂದ್ರದಲ್ಲೂ ಕಂದಾಯ ಅದಾಲತ್ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಬಿಕ್ಕೋಡು ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕಂದಾಯ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು. ಬೇಲೂರು ಪಟ್ಟಣದ ತಾಲೂಕು ಕಚೇರಿಗೆ ರೈತರು, ಸಾರ್ವಜನಿಕರು ಸಮಸ್ಯೆಗಳನ್ನು ಹೊತ್ತು ಅಲೆದಾಡಬಾರದೆಂಬ ಉದ್ದೇಶದಿಂದ ಪ್ರತಿ ಹೋಬಳಿ ಕೇಂದ್ರಗಳಲ್ಲೂ ಅದಾಲತ್ ನಡೆಸಲಾಗುತ್ತಿದೆ. ಇಲ್ಲಿ ಪೌತಿ ಖಾತೆ, ಪಿಂಚಣಿ, ಪಡಿತರ, ಸರ್ವೇಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಿ, ಇತ್ಯರ್ಥ ಮಾಡಿಕೊಳ್ಳಬಹುದು. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನೂ ಅಧಿಕಾರಿಗಳಿಂದ ಕೊಡಿಸಲಾಗುತ್ತದೆ. ಉಳಿದ ಸಮಸ್ಯೆಗಳಿಗೆ ನಿಗದಿತ ದಿನಾಂಕದಲ್ಲಿ ಉತ್ತರ ದೊರಕಲಿದೆ ಎಂದರು.
ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರ ಖಚಿತವಾಗಿದೆ. ಸಮಾಧಾನದಿಂದ ಸಾರ್ವಜನಿಕರು ಇಲಾಖೆಗಳೊಂದಿಗೆ ಸಹಕಾರ ನೀಡಬೇಕು. ಆಕ್ರೋಶದಿಂದ ಮಾತನಾಡುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಎಲ್ಲ ಇಲಾಖೆಗಳಿಗೂ ಮಾತೃ ಸ್ಥಾನದಲ್ಲಿ ಕಂದಾಯ ಇಲಾಖೆ ಇದೆ. ಅಧಿಕಾರಿಗಳು ರೈತರ ಯಾವುದೇ ಸಮಸ್ಯೆಗಳಿದರೂ ಮೊದಲು ಪರಿಹರಿಸಬೇಕು. ನಂತರ ಸಮಸ್ಯೆಗಳಿರುವ ಸಾರ್ವಜನಿಕರನ್ನು ಗ್ರಾಮ ಪಂಚಾಯಿತಿವಾರು ಪ್ರತ್ಯೇಕವಾಗಿ ಕರೆದು ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡಲಾಗುವುದು ಎಂದವರು ಭರವಸೆ ಇತ್ತರು.
ತಹಸೀಲ್ದಾರ್ ಮಮತಾ, ತಾಪಂ ಇಒ ವಸಂತಕುಮಾರ್, ವಲಯ ಅರಣ್ಯಾಧಿಕಾರಿ ಯತೀಶ್, ಬಿಕ್ಕೋಡು ಗ್ರಾಪಂ ಅಧ್ಯಕ್ಷ ಹೇಮಚಂದ್ರ, ಲಕ್ಕುಂದ ಗ್ರಾಪಂ ಅಧ್ಯಕ್ಷೆ ರಾಧಾ, ಕೋಗಿಲಮನೆ ಗ್ರಾಪಂ ಅಧ್ಯಕ್ಷ ಶಿವಕುಮಾರ್, ಉಪ ತಹಶೀಲ್ದಾರ್ ಪ್ರದೀಪ್ ಸೇರಿದಂತೆ ಇತರರು ಇದ್ದರು.