

ಗಜೇಂದ್ರಗಡ: ಮಾರಕ ಕರೊನಾ ವೈರಸ್ ಹರಡದಂತೆ ತಡೆಯಲು ಮುಂಜಾಗ್ರತೆ ಕ್ರಮವಾಗಿ ಪ್ರಧಾನಿ ಮೋದಿ ಅವರು ಆದೇಶ ಹೊರಡಿಸಿರುವ ಜನತಾ ಕರ್ಫ್ಯೂಗೆ ಕೋಟೆನಾಡು ಗಜೇಂದ್ರಗಡ ಜನತೆಯಿಂದ ಉತ್ತಮ ಸ್ಪಂದನೆ ದೊರೆತಿದೆ.
ಬಿಕೋ ಎನ್ನುತ್ತಿದ್ದ ರಸ್ತೆಗಳು: ದೇಶದಲ್ಲಿ ಕರೊನಾ 2ನೇ ಹಂತದಲ್ಲಿದ್ದು, ವ್ಯಾಪಕವಾಗಿ ಹರಡುವ ಅಪಾಯವಿದೆ. ಇದನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಒಂದು ದಿನ ಜನರು ಮನೆಯಲ್ಲೇ ಇರುವಂತೆ ಕರೆ ನೀಡಿದ್ದರಿಂದ ಜನತೆ ಬೆಳಗ್ಗೆಯಿಂದ ಸಂಜೆಯವರೆಗೂ ಮನೆ ಬಿಟ್ಟು ಹೊರಗೆ ಬರಲೇ ಇಲ್ಲ. ಪಟ್ಟಣದ ಪ್ರಮುಖ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಪಟ್ಟಣದ ವಾಣಿಜ್ಯ ಸಂಕೀರ್ಣಗಳು ಬಾಗಿಲು ಮುಚ್ಚಿದ್ದವು. ಎಪಿಎಂಸಿ, ಕಾಯಿಪಲ್ಲೆ ಮಾರುಕಟ್ಟೆ, ಹೂವಿನ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು. ಮನೆಗೆ ಹಾಗೂ ಯುಗಾದಿಗೆ ಬೇಕಾದ ದಿನಸಿ ಪದಾರ್ಥ ಹಾಗೂ ಹಣ್ಣು ತರಕಾರಿಯನ್ನು ಶನಿವಾರವೇ ಖರೀದಿಸಿದ್ದರಿಂದ ಅಷ್ಟಾಗಿ ಜನರಿಗೆ ಸಮಸ್ಯೆಯಾಗಲಿಲ್ಲ.
ಗ್ರಾಮಗಳು ಸ್ತಬ್ಧ: ಕರೊನಾ ವೈರಸ್ ದೂರ ಇಡಲು ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂಬ ನಿರ್ಧಾರಕ್ಕೆ ಜನಸಾಮಾನ್ಯರು ಬಂದಿರುವುದರಿಂದ ಸಮೀಪದ ಗೋಗೇರಿ, ರಾಜೂರ, ದಿಂಡೂರ, ಉಣಚಗೇರಿ, ಕುಂಟೋಜಿ, ಮುಶಿಗೇರಿ, ಇಟಗಿ, ಸೂಡಿ, ಬೇವಿನಕಟ್ಟಿ, ಲಕ್ಕಲಕಟ್ಟಿ, ಕೊಡಗಾನೂರ, ಕಾಲಕಾಲೇಶ್ವರ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಜನರು ಮನೆಯಿಂದ ಹೊರಬರಲು ನಿರ್ಧರಿಸದ ಹಿನ್ನೆಲೆಯಲ್ಲಿ ಸಂಪೂರ್ಣ ಸ್ತಬ್ಧಗೊಂಡು ಜನತಾ ಕರ್ಫ್ಯೂಗೆ ಗ್ರಾಮೀಣ ಭಾಗದಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾದಂತೆ ಕಂಡು ಬಂತು.