

ಹಾಸನ: ಬಿಕಾಂ ಓದುವ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಉದ್ಯೋಗ ಭರವಸೆಯನ್ನೂ ಮೂಡಿಸುವ ಸದುದ್ದೇಶದಿಂದ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ ಹೊಸ ಕೋರ್ಸ್ ಆರಂಭಿಸುತ್ತಿದ್ದು, ಜಿಲ್ಲೆಯ ವಿದ್ಯಾರ್ಥಿನಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ. ಕವಿತಾ ಹೇಳಿದರು.
ರಾಜ್ಯ ಸರ್ಕಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಈ ಕೋರ್ಸ್ ಆರಂಭಿಸುತ್ತಿದ್ದು, ಮೊದಲ ಬಾರಿಗೆ ಜಿಲ್ಲೆಯ ಎರಡೂ ಕಾಲೇಜುಗಳಿಂದ 120 ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ಇದೆ. ನಮ್ಮ ಕಾಲೇಜಿನಲ್ಲಿ ಈಗಾಗಲೇ ಅರ್ಜಿಯನ್ನು ವಿತರಿಸಲಾಗಿತ್ತದೆ. ಈ ಕೋರ್ಸ್ ಪಡೆಯುವ ವಿದ್ಯಾರ್ಥಿಗಳು ಆರಂಭದ 2 ವರ್ಷ ಕಾಲೇಜಿನಲ್ಲೇ ವ್ಯಾಸಂಗ ಮಾಡಬೇಕು. ಅಂತಿಮ ವರ್ಷ ಅವರು ಆಯ್ಕೆ ಮಾಡಿಕೊಳ್ಳುವ ಕಾರ್ಖಾನೆ ಅಥವಾ ಕಂಪನಿಗಳಲ್ಲೇ ಉಳಿದು ಕೆಲಸ ಮಾಡಬೇಕು. ಆ ಅವಧಿಯಲ್ಲಿ ಮಾಸಿಕ 10 ಸಾವಿರ ಸ್ಟೈಫಂಡ್ ಸಿಗಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಕ್ಕಳಲ್ಲಿ ಉದ್ಯೋಗ ಖಾತ್ರಿ ಮೂಡಿಸುವುದು ಈ ಕೋರ್ಸ್ ಉದ್ದೇಶ. ಮೈಸೂರು ಮಹಾರಾಣಿ ಕಾಲೇಜು ಬಿಟ್ಟರೆ ನಮ್ಮ ಜಿಲ್ಲೆಯ ಎರಡು ಕಾಲೇಜುಗಳಿಗೆ ಈ ಅವಕಾಶ ಸಿಕ್ಕಿದೆ. ಉದ್ಯೋಗ ಪಡೆಯಲು ಪೂರಕವಾದ ಕೌಶಲ್ಯವನ್ನು ಕಾಲೇಜು ಜೊತೆಗೆ ಅಲ್ಲೂ ಕಲಿತುಕೊಳ್ಳಬಹುದು ಎಂದ ಅವರು, ಈ ಸಂಬಂಧ ಸರ್ಕಾರ ರಾಜ್ಯದ ಒಟ್ಟು 11 ಜಿಲ್ಲೆಗಳ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಪದವಿ ಜೊತೆಗೆ ಸಂಪಾದನೆಯೂ ಆಗಲಿದೆ. ತಿಳುವಳಿಕೆ ಜೊತೆಗೆ ಉದ್ಯೋಗ ನಿರ್ವಹಣೆಯ ಚಾಕಚಾಕ್ಯತೆ ಸಹ ಪಡೆಯಬಹುದು. ಅಪ್ರೆಂಟಿಶಿಪ್ ಮ್ಯಾನೇಜ್ ಮೆಂಟ್ ಕೋರ್ಸ್‌ಗೆ ಈಗಾಗಲೇ ಪ್ರವೇಶಾತಿ ಆರಂಭವಾಗಿದೆ ಎಂದು ತಿಳಿಸಿದರು.
ಕಾಮರ್ಸ್ ವಿಭಾಗ ಮುಖ್ಯಸ್ಥರಾದ ರಾಜಶೇಖರ್ ಮಾತನಾಡಿ, ಈ ಕೋರ್ಸ್‌ಗೆ ಸೇರ ಬಯಸುವ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕಾರ್ಮರ್ಸ್ ಓದಿರಬೇಕು. ಕೋರ್ಸ್‌ಗೆ ಸೇರಿದವರು ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಬೇಕಾದರೂ ಕಂಪನಿ ಆಯ್ದುಕೊಳ್ಳಬಹುದು, ಉದ್ಯೋಗ ಅವರಿಗೆ ತೃಪ್ತಿಯಾದರೆ ಅಲ್ಲೇ ಮುಂದುವರಿಯಬಹುದು. ಇಲ್ಲವಾದರೆ ವ್ಯಾಸಂಗ ಮುಂದುವರಿಸಲು ಅವಕಾಶ ಇದೆ ಎಂದರು. ಈ ಕೋರ್ಸ್ ಮೊದಲು ತೆಲಂಗಾಣ, ನಂತರ ಮಹಾರಾಷ್ಟದಲ್ಲಿ ಯಶಸ್ವಿಯಾಗಿದೆ. ಇದೀಗ ಕರ್ನಾಟಕದಲ್ಲಿ ಜಾರಿ ಮಾಡಲಾಗುತ್ತಿದೆ. ಬೇಡಿಕೆ ಹೆಚ್ಚಾದರೆ ಹೆಚ್ಚುವರಿ ಪ್ರವೇಶಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪನ್ಯಾಸಕರಾದ ಹರೀಶ್, ಯೋಗೇಶ್, ಮಂಜುಳ ಇತರರಿದ್ದರು
ಮೇ.30 ರಂದು ಉದ್ಯೋಗ ಮೇಳ :
ಮೇ.30 ರಂದು ಉದ್ಯೋಗ ಮೇಳ ಪದವಿ ಮುಗಿಸಿದ ಯುವತಿಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮೇ 30ರಂದು ನಗರದ ಎಂಜಿ ರಸ್ತೆಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ. ಎಂದು ವಿವರಿಸಿದರು
ಈ ಉದ್ಯೋಗ ಮೇಳದಲ್ಲಿ ಸಾಕಷ್ಟು ಕಂಪನಿಗಳು ಭಾಗವಹಿಸಲಿದ್ದು, ಜಿಲ್ಲೆಯಲ್ಲಿ ಪದವಿಪಡೆದಿರುವ ವಿದ್ಯಾರ್ಥಿನಿಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಇದರ ಜೊತೆಗೆ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಪದವಿ ಕೊರ್ಸ್‌ಗಳಾದ ಬಿಎ, ಬಿಕಾಂ, ಬಿಎಸ್‌ಸಿ, ಬಿಸಿ ಎ, ಬಿಬಿಎ ಕೋರ್ಸ್‌ಗಳಿಗೆ ಪ್ರವೇಶ ಪ್ರಾರಂಭವಾಗಿದೆ ಎಂದರು