

ವಿಜಯಪುರ: ಬಿ.ಎಸ್. ಯಡಿಯೂರಪ್ಪ ಕರೊನಾ ಸೋಂಕಿನಿಂದ ಬೇಗ ಗುಣಮುಖರಾಗಲಿ ಎಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ವಿಶೇಷ ಪೂಜೆ ಸಲ್ಲಿಸಿದರು.
ಇಲ್ಲಿನ ಐತಿಹಾಸಿಕ ಸುಂದರೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಅಭಿಷೇಕ ನೆರವೇರಿಸಿದರು. ಪೂಜೆ-ಪುನಸ್ಕಾರದ ಬಳಿಕ ದೇವಸ್ಥಾನದ ಆವರಣದಲ್ಲಿ ಕೆಲ ಕಾಲ ಪ್ರಾರ್ಥನೆ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾಮಾರಿ ಕರೊನಾ ಜಗತ್ತನ್ನೇ ತಲ್ಲಣಗೊಳಿಸಿದ್ದು ಇದೀಗ ರಾಜ್ಯದಲ್ಲಿ ಎರಡನೇ ಅಲೆ ಜೋರಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಸಮರೋಪಾದಿಯಲ್ಲಿ ನಿಯಂತ್ರಣ ಕಾರ್ಯ ಕೈಗೊಳ್ಳುತ್ತಿದೆ. ಸ್ವತಃ ಸೋಂಕಿಗೆ ಒಳಗಾಗಿದ್ದರೂ ಯಡಿಯೂರಪ್ಪ ಅವರು ಆಡಳಿತ ಯಂತ್ರ ಸರಿದೂಗಿಸಲು ಆಸ್ಪತ್ರೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ದೈನಂದಿನ ಆಗು ಹೋಗುಗಳ ಮೇಲೆ ನಿಗಾ ಇರಿಸಿದ್ದಾರೆ. ಆದಷ್ಟು ಬೇಗ ಅವರ ಆರೋಗ್ಯ ಸುಧಾರಿಸಲಿ. ನಾಡಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸಲು ಭಗವಂತ ಇನ್ನೂ ಹೆಚ್ಚು ಹೆಚ್ಚು ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಸುಂದರೇಶ್ವರ ದೇವಸ್ಥಾನ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ಇಲ್ಲಿನ ಲಿಂಗದ ಮೇಲೆ ಚಕ್ರವಿದ್ದು ಕಾಶಿ ನಂತರದ ಪ್ರಸಿದ್ಧ ಲಿಂಗ ಎಂಬ ಖ್ಯಾತಿ ಪಡೆದಿದೆ. ಈ ಹಿಂದೆ ಯಡಿಯೂರಪ್ಪ ಅವರು ಎರಡು ಬಾರಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದನ್ನು ವಿಜುಗೌಡ ಪಾಟೀಲ ಸ್ಮರಿಸಿಕೊಳ್ಳುತ್ತಾರೆ.
ಬಿಜೆಪಿ ಮುಖಂಡರಾದ ಭೀಮಾಶಂಕರ ಹದನೂರ, ಮಂಡಲ ಅಧ್ಯಕ್ಷ ವಿಠಲ ಕಿರೇಸೂರ ಮತ್ತಿತರರಿದ್ದರು.