

ಹುಮನಾಬಾದ್: ತಾಲೂಕಿನ ಹಳ್ಳಿಖೇಡ್ (ಬಿ) ಹತ್ತಿರದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ) ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಸುಭಾಷ ಕಲ್ಲೂರ್ ಹಾಗೂ ಉಪಾಧ್ಯಕ್ಷರಾಗಿ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವಿರೋಧ ಆಯ್ಕೆಯಾಗಿದ್ದಾರೆ.
ಕಾರ್ಖಾನೆಯ ಆವರಣದಲ್ಲಿ ಬುಧವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಸುಭಾಷ ಕಲ್ಲೂರ್, ಉಪಾಧ್ಯಕ್ಷ ಸ್ಥಾನಕ್ಕೆ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿಗಳಾದ ತಹಸೀಲ್ದಾರ್ ಜಯಶ್ರೀ ಅವರು ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಕಲ್ಲೂರ್ ಹಾಗೂ ಉಪಾಧ್ಯಕ್ಷ ಡಾ.ಬೆಲ್ದಾಳೆ ಮಾತನಾಡಿ, ಆರ್ಥಿಕ ಸಂಕಷ್ಟದಲ್ಲಿರುವ ಕಾರ್ಖಾನೆ ಎರಡು ವರ್ಷದಿಂದ ಬಂದ್ ಇದೆ. ಇದರಿಂದ ರೈತರಿಗೆ ಬಹಳ ಸಮಸ್ಯೆ ಆಗುತ್ತಿದೆ. ಹೇಗಾದರೂ ಮಾಡಿ ಕಾರ್ಖಾನೆಗೆ ಪುನರಾರಂಭಿಸುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಇದು ಸರಳ ಕೆಲಸವಲ್ಲ ಎಂಬುದು ನಮಗೆ ಗೊತ್ತು. ಆದರೆ ಸರ್ಕಾರವು ರೈತರ ಹಿತದಿಂದ ನಮ್ಮ ಗೋಳನ್ನು ಕೇಳುತ್ತದೆ ಎಂಬ ವಿಶ್ವಾಸವಿದೆ ಎಂದರು.
ಜಿಲ್ಲೆಯ ಹಳೇ ಕಾರ್ಖಾನೆಯು ಕಬ್ಬು ಬೆಳೆಗಾರರ ಆಶಾಕಿರಣವೆನಿಸಿದೆ. ರೈತರ ಬವಣೆ ಕಡಿಮೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ತರಲು ಪ್ರಯತ್ನಿಸಲಾಗುವುದು. ಆದಷ್ಟು ಬೇಗ ಮುಖ್ಯಮಂತ್ರಿ, ಸಹಕಾರ ಸಚಿವರು, ಸಕ್ಕರೆ ಸಚಿವರಿಗೆ ಭೇಟಿ ಮಾಡಿ ಇಲ್ಲಿ ಆಗಬೇಕಾದ ಕೆಲಸಕಾರ್ಯಗಳ ಪಟ್ಟಿ ಸಲ್ಲಿಸಿ, ಅನುದಾನ ಕೊಡುವ ಬೇಡಿಕೆ ಮಂಡಿಸುವುದಾಗಿ ಹೇಳಿದರು.
ನಿರ್ದೇಶಕರಾದ ಮಲ್ಲಿಕಾರ್ಜುನ ಪಾಟೀಲ್, ಮಾಣಕಪ್ಪ , ವಿಶ್ವನಾಥ ಪಾಟೀಲ್, ಅಪ್ಪರಾವ ಇಸ್ಮಾಯಿಲಪ್ಪ, ರಾಜಪ್ಪ , ಶ್ರೀನಿವಾಸ, ಅಶೋಕ ಪಾಟೀಲ್, ಕಲಾವತಿ ಶಿವರಾಜ ಇದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಶೀವಾನಂದ ಮಂಠಾಳಕಾರ್, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸದಸ್ಯ ಬಸವರಾಜ ಆರ್ಯ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೋಮನಾಥ ಪಾಟೀಲ್, ಪ್ರಮುಖರಾದ ಮಲ್ಲಿಕಾರ್ಜುನ ಪ್ರಭಾ, ನಾಗೇಶ ಕಲ್ಲೂರ್, ಜಗನ್ನಾಥ ಪಾಟೀಲ್, ಹಣಮಂತರಾವ ಪಾಟೀಲ್, ಅರುಣಕುಮಾರ ಕುಲಕರ್ಣಿ, ರಾಜರೆಡ್ಡಿ, ರಮೇಶ ಕಲ್ಲೂರ್, ಶಾಂತವೀರ ಕೇಸ್ಕರ್, ಜಗನ್ನಾಥ ಪಾಟೀಲ್ ಸಿರಕಟನಳ್ಳಿ ಇತರರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸತ್ಕರಿಸಿದರು. ಈ ವೇಳೆ ಬೆಂಬಲಿಗರಿಂದ ಸರಳವಾಗಿ ವಿಜಯೋತ್ಸವ ಆಚರಿಸಲಾಯಿತು.
ಕಾರ್ಖಾನೆ ಆರಂಭದ ಭರವಸೆ
ಸಾಲದ ಹೊರೆ, ಆರ್ಥಿಕ ಮುಗ್ಗಟ್ಟಿನಿಂದ ಬಿಎಸ್ಸೆಸ್ಕೆ ಎರಡು ವರ್ಷದಿಂದ ಬಂದ್ ಆಗಿದೆ. ಈ ಕಾರ್ಖಾನೆಗೆ ಪುನಶ್ಚೇತನ ಮಾಡಿ ಮತ್ತೆ ಆರಂಭಿಸುವುದು ಸವಾಲಿನ ಸಂಗತಿ. ಇಂಥದರಲ್ಲಿ ಬಿಜೆಪಿ ಮುಖಂಡರಾದ ಸುಭಾಷ ಕಲ್ಲೂರ್, ಡಾ. ಶೈಲೇಂದ್ರ ಬೆಲ್ದಾಳೆ ಅವರು ಇದರ ಸಾರಥ್ಯ ವಹಿಸಿಕೊಂಡಿರುವುದು ಗಮನಾರ್ಹ ಎನಿಸಿದೆ. ಇತ್ತೀಚೆಗೆ ಜರುಗಿದ್ದ ಆಡಳಿತ ಮಂಡಳಿ ಚುನಾವಣೆಯಲ್ಲಿ ಕಲ್ಲೂರ್ ಹಾಗೂ ಬೆಲ್ದಾಳೆ ನೇತೃತ್ವದ ಪೆನಾಲ್ ಭರ್ಜರಿ ಜಯ ಗಳಿಸಿತ್ತು. ಸರ್ಕಾರದ ಪರವಾಗಿ ಒಬ್ಬರ ನಾಮನಿರ್ದೇಶನ ಸ್ಥಾನ ಖಾಲಿಯಿತ್ತು. ಈ ಸ್ಥಾನಕ್ಕೆ ಡಾ. ಬೆಲ್ದಾಳೆ ಅವರನ್ನು ನೇಮಿಸಲಾಗಿತ್ತು. ಇದರ ಜತೆಗೆ ಉಪಾಧ್ಯಕ್ಷ ಸ್ಥಾನ ಸಹ ಒದಗಿಸಲಾಗಿದೆ. ಕಲ್ಲೂರ್ ಎರಡನೇ ಬಾರಿಗೆ ಬಿಎಸ್ಸೆಸ್ಕೆ ಅಧ್ಯಕ್ಷ ಸ್ಥಾನಕ್ಕೇರಿದ್ದಾರೆ. ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಆಪ್ತ ವಲಯದಲ್ಲಿರುವ ಬೆಲ್ದಾಳೆ ಅವರನ್ನು ಮೊದಲ ಸಲ ಕಾರ್ಖಾನೆಯಲ್ಲಿ (ಸಹಕಾರ ಕ್ಷೇತ್ರದಲ್ಲಿ) ಸ್ಥಾನ ಸಿಕ್ಕಿರುವುದು ವಿಶೇಷ. ಇಬ್ಬರೂ ಬಿಜೆಪಿ ಮುಖಂಡರಿಗೆ ಸಾರಥ್ಯ ಸಿಕ್ಕಿದ್ದರಿಂದ ಎರಡು ವರ್ಷದಿಂದ ಬಂದ್ ಆದ ಕಾರ್ಖಾನೆ ಪುನಃ ಪ್ರಾರಂಭವಾಗುವ ಭರವಸೆಗಳು ಮೂಡಿವೆ.
ಕಾರ್ಖಾನೆ ಮತ್ತೆ ಪ್ರಾರಂಭಿಸಿ ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸುವುದೇ ನಮ್ಮ ಧ್ಯೇಯ. ಸರ್ಕಾರ ಸೇರಿ ವಿವಿಧ ಮೂಲಗಳಿಂದ ಅನುದಾನ ತರುವ ಉದ್ದೇಶವಿದೆ. ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.| ಡಾ.ಶೈಲೇಂದ್ರ ಬೆಲ್ದಾಳೆಬಿಎಸ್ಸೆಸ್ಕೆ ನೂತನ ಉಪಾಧ್ಯಕ್ಷ