

ತುಮಕೂರು: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ಸೆಡ್ಡುಹೊಡೆಯಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ಬಲಪ್ರದರ್ಶನಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಮಾ.4ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ ಮಂದಿರದಲ್ಲಿ ಹಳೇ ಮೈಸೂರು ಪ್ರಾಂತ್ಯದ "ವೀರಶೈವ ಲಿಂಗಾಯತ ಮಹಾಸಂಗಮ' ಆಯೋಜಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಜ್ಜುಗೊಳ್ಳಲಾಗಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಲು ಶ್ರಮಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಬಗ್ಗೆ ಬಿಜೆಪಿ ಕೆಲ ಮುಖಂಡರು ಹೀನಾಯವಾಗಿ ಮಾತನಾಡುತ್ತಿದ್ದು, ಅವರಿಗೆ ಬಿಎಸ್ವೈ ಬಲ ಏನೆಂಬುದನ್ನು ತೋರಿಸಲು ಹಳೇ ಮೈಸೂರು ಪ್ರಾಂತ್ಯದ ವೀರಶೈವ ಲಿಂಗಾಯತ ಮುಖಂಡರ ಸಭೆ ಕರೆಯಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜಿಲ್ಲೆಯ ವೀರಶೈವ- ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿ, ಬಿಎಸ್ವೈ ಬಲ ಪ್ರದರ್ಶನದ ಈ ಸಭೆಗೆ ವೀರ ಶೈವ ಲಿಂಗಾಯತ ಮಹಾ ಸಂಗಮ ಎಂದು ಹೆಸರಿಡಲಾಗಿದೆ. ಅಂದು ಹಳೇ ಮೈಸೂರು ಭಾಗದ ಎಲ್ಲ ಜಿಲ್ಲೆಗಳ ಯಡಿಯೂರಪ್ಪ ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಂಡು ಮುಂದಿನ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಇದೇ ರೀತಿಯ ಪೂರ್ವಭಾವಿ ಸಭೆ ಉತ್ತರ ಕರ್ನಾಟಕದಲ್ಲಿ ಏರ್ಪಡಿಸಿದ ಬಳಿಕ ಒಂದು ಬೃಹತ್ ಸಮಾವೇಶ ನಡೆಸುವ ಆಲೋಚನೆ ಇದೆ ಎಂದು ತಿಳಿಸಿದರು.
ಇಡೀ ರಾಜ್ಯದ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಬೆಳವಣಿಗೆಗೆ ಹಲವಾರು ಯೋಜನೆ ಜಾರಿಗೆ ತಂದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ದುಡಿದವರು ಬಿ.ಎಸ್. ಯಡಿಯೂರಪ್ಪ. ಅವರ ಪರವಾಗಿ ನಾವೆಲ್ಲರೂ ನಿಲ್ಲಬೇಕಾಗಿದೆ. ಬಿಎಸ್ವೈ ಹೇಗೆ ನಮ್ಮ ನಾಯಕರೋ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಸಹ ನಮ್ಮ ನಾಯಕರೇ. ಹಾಗಾಗಿ ಅವರ ಪರವಾಗಿ ನೀವೆಲ್ಲರೂ ನಿಲ್ಲಬೇಕಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ ಹೇಳಿದರು.
ಮುಖಂಡರಾದ ಎಸ್.ಡಿ.ದಿಲೀಪ ಕುಮಾರ್, ಚಂದ್ರಶೇಖರಬಾಬು, ವೀರಶೈವ, ಲಿಂಗಾಯತ ಸಮುದಾಯಕ್ಕೆ ಸೇರಿದ ವಿವಿಧ ಸಹಕಾರ ಬ್ಯಾಂಕ್ಗಳ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ, ಓಹಿಲೇಶ್ವರ್, ಬಾವಿಕಟ್ಟೆ ಮಂಜುನಾಥ್, ಹಿರಿಯರಾದ ಸಿ.ವಿ.ಮಹದೇವಯ್ಯ, ಬಿಜೆಪಿ ವಕ್ತಾರ ಟಿ.ಆರ್.ಸದಾಶಿವಯ್ಯ, ಎಚ್.ಎನ್.ದೀಪಕ್ ಸೇರಿ ಹಲವರು ಪಾಲ್ಗೊಂಡಿದ್ದರು.
ಯಡಿಯೂರಪ್ಪ ಕರ್ನಾಟಕದ ವೀರಶೈವ ಲಿಂಗಾಯತರ ಪ್ರಶ್ನಾತಿತ ರಾಜಕೀಯ ನಾಯಕರು, ಅವರನ್ನು ಕಡೆಗಣಿಸಿದರೆ ಬಿಜೆಪಿಗೆ ರಾಜ್ಯದಲ್ಲಿ ಉಳಿಗಾಲವಿಲ್ಲ. ನಮ್ಮ ನಾಯಕರಿಗೆ ಈ ರೀತಿಯ ಕಿರುಕುಳ ನೀಡುವುದು ಸಲ್ಲದು.| ಡಾ.ಎಸ್.ಪರಮೇಶ್, ಜಿಲ್ಲಾಧ್ಯಕ್ಷ, ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭೆಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನೀಡಿದ ಹಲವಾರು ಯೋಜನೆಗಳಿಂದ ತುಮಕೂರು ಜಿಲ್ಲೆ ಅಭಿವೃದ್ಧಿ ಕಂಡಿದೆ. ಹಾಗಾಗಿ ಅವರನ್ನು ಪಕ್ಷ ಕಡೆಗಣಿಸಿದರೆ, ಸಮಾಜ ಪಕ್ಷವನ್ನು ಕಡೆಗಣಿಸುವುದು ಅನಿವಾರ್ಯವಾಗುತ್ತದೆ.| ಎಸ್.ಜಿ.ಚಂದ್ರಮೌಳಿ, ಅಧ್ಯಕ್ಷ ನಗರವೀರಶೈವ ಸೇವಾ ಸಮಾಜನಾವು ಜಾತಿ ರಾಜಕಾರಣ ಮಾಡಲ್ಲ. ಎಲ್ಲ ಸಮಾಜವನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸಮಾಜ ನಮ್ಮದು. ದುಷ್ಟ ಶಕ್ತಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಎಲ್ಲ ಒಳಪಂಗಡಗಳನ್ನು ಸೇರಿ ಒಂದು ವೇದಿಕೆ ತರುವ ಪ್ರಯತ್ನ ಈ ಮೂಲಕ ಮಾಡುತ್ತಿದ್ದು, ಜಾತಿಗಣತಿಯಲ್ಲಿ ನಮ್ಮ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ. ವೀರಶೈವ ಸಮಾಜದವರು ಸಿಎಂ ಆದಾಗ ಹೆಜ್ಜೆಹೆಜ್ಜೆಗು ತೊಂದರೆ ಕೊಟ್ಟಿದ್ದು ನಮ್ಮ ಶಕ್ತಿ ತೋರಿಸಲು ಈ ಮಹಾಸಂಗಮ ಆಯೋಜಿಸುತ್ತಿದ್ದೇವೆ.| ಎಂ.ಪಿ.ರೇಣುಕಾಚಾರ್ಯ ಮಾಜಿ ಸಚಿವ