ಬಿಎಸ್‌ವೈ, ಸೋಮಣ್ಣ ನಡುವೆ ಯಾವುದೇ ಮನಸ್ತಾಪವಿಲ್ಲ

murugesh nirani
Published on

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ ಎಂದು ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮ ನಾಯಕರು. ಸೋಮಣ್ಣ ಅವರೂ ಸಮಾನವಾಗಿ ಬೆಳೆದು ಬಂದಿದ್ದಾರೆ. ಇಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ. ವಿ.ಸೋಮಣ್ಣ ಹಲವಾರು ಬಾರಿ ದೆಹಲಿಗೆ ಹೋಗಿದ್ದಾರೆ. ನಾನೂ ಹೋಗಿರುವೆ. ಅದರಲ್ಲಿ ಏನು ವಿಶೇಷ? ಸಣ್ಣಪುಟ್ಟ ಸಮಸ್ಯೆ ಇದ್ದರೆ ನಮ್ಮ ನಾಯಕರು ಒಂದು ನಿಮಿಷದಲ್ಲಿ ಬಗೆಹರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ಬೆಳಗಾವಿಯ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಉಸ್ತುವಾರಿಯಾಗಿದ್ದೆ. ನನ್ನನ್ನು ಬಿಜೆಪಿ ಕಡೆಗಣಿಸಿಲ್ಲ. ಮುಂದೆಯೂ ಕಡೆಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ನಮ್ಮಲ್ಲಿ 224 ಕ್ಷೇತ್ರಗಳ ಎಲ್ಲ ಅಭ್ಯರ್ಥಿಗಳೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ಎಂದರು.

ನಮ್ಮ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಾರೆ ಎಂಬುದು ಸುಳ್ಳು. ಸಿದ್ದರಾಮಯ್ಯ ಏಕೆ ಆ ರೀತಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ನಮ್ಮ ಸಕ್ಕರೆ ಫ್ಯಾಕ್ಟರಿ ಬಳಿ ರೈತರ ಎದುರು ತೂಕ ಹಾಕಿ ರಿಜಿಸ್ಟರ್‌ನಲ್ಲಿ ಬರೆದುಕೊಳ್ಳಲಾಗುತ್ತದೆ. ಯಾರು ಬೇಕಾದರೂ ಪರಿಶೀಲನೆ ಮಾಡಿಕೊಳ್ಳಬಹುದು. ಪ್ರತಿ ವರ್ಷ ಸಕ್ಕರೆ ಹಂಚುತ್ತೇವೆ. ಇದನ್ನೆಲ್ಲ ಚುನಾವಣೆಗಾಗಿ ಮಾಡುತ್ತಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೆ 6 ವಿಮಾನ ನಿಲ್ದಾಣಗಳು ಉದ್ಘಾಟನೆಗೆ ಸಿದ್ಧವಾಗುತ್ತಿವೆ. ರಾಯಚೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಒಟ್ಟು 6 ಕಡೆ ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 100 ಕಿಲೋಮೀಟರ್‌ಗೆ ಒಂದರಂತೆ ವಿಮಾನ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net