

ಹನೂರು: ಬಹುಜನರು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗಬೇಕಾದರೆ ಬಿಎಸ್ಪಿ ಬೆಂಬಲಿಸಬೇಕಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಶೋಕ್ ಸಿದ್ಧಾರ್ಥ್ ಮನವಿ ಮಾಡಿದರು.
ಪಟ್ಟಣದ ಆರ್.ಎಸ್.ದೊಡ್ಡಿ ಬಳಿ ಬುಧವಾರ ಬಿಎಸ್‌ಪಿ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದುವರೆಗೂ ಆಡಳಿತ ನಡೆಸಿದ ಪಕ್ಷಗಳು, ಡಾ.ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಅವಕಾಶ ಕಲ್ಪಿಸಿಕೊಟ್ಟ ಮತದ ಮೌಲ್ಯವನ್ನು ಸಾಕಾರ ಮಾಡಿಲ್ಲ. ದೌರ್ಜನ್ಯ, ದಬ್ಬಾಳಿಕೆ ಜೀವಂತವಾಗಿದೆ. ಆದ್ದರಿಂದ ಮಾಯವತಿ ಅವರ ಕೈಬಲಪಡಿಸಲು ಹಾಗೂ ಬಹುಜನರ ಅಭಿವೃದ್ಧಿಗೆ ಪ್ರತಿಯೊಬ್ಬರೂ ಬಿಎಸ್ಪಿ ಬೆಂಬಲಿಸಬೇಕಿದೆ ಎಂದು ತಿಳಿಸಿದರು.
ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿ, ಕೆಲ ರಾಜಕೀಯ ಪಕ್ಷಗಳು ಮತಕ್ಕಾಗಿ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿದ್ದು, ಅನ್ಯಾಯವೆಸಗುತ್ತಿವೆ.
ಸಿದ್ದರಾಮಯ್ಯ ನಾನೇ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್ ಕುಟುಂಬ ರಾಜಕಾರಣದಲ್ಲಿ ವ್ಯಾಮೋಹದಲ್ಲಿದೆ. ಇತ್ತ ಬಿಜೆಪಿ ಜನರಿಗೆ ಮೋಸ ಮಾಡುತ್ತಿದೆ. ಹಾಗಾಗಿ ಬಿಎಸ್ಪಿ ಅಧಿಕಾರಕ್ಕೆ ಬಂದರೆ ಮಾತ್ರ ಬಹುಜನರು ಉಳಿಯಲಿಕ್ಕೆ ಸಾಧ್ಯ ಎಂದರು.
ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಹನೂರು ಘಟಕಾಧ್ಯಕ್ಷ ಎಂ.ಮಾದೇಶ್, ಜಿಲ್ಲಾ ಕಾರ್ಯದರ್ಶಿ ಕೆ.ಸಿದ್ದರಾಜು, ತಾಲೂಕು ಸಂಯೋಜಕರಾದ ಎಸ್.ಪಿ. ಮಹೇಶ್, ಮಣಿ, ಸುರೇಶ್, ಮುಖಂಡರಾದ ಮಂಟೇಲಿಂಗ, ರಾಯಪ್ಪ, ಶಿವಣ್ಣ ಇದ್ದರು.