ಬಿಎಸ್‌ಎಸ್‌ಕೆ ಮುನ್ನಡೆಸುವಲ್ಲಿ ವಿಫಲ

Subhash ganga
Published on

ಹುಮನಾಬಾದ್: ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಮುನ್ನಡೆಸುವಲ್ಲಿ ಅಧ್ಯಕ್ಷ ಸುಭಾಷ ಕಲ್ಲೂರ ವಿಫಲರಾಗಿದ್ದಾರೆ ಎಂದು ಬಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಸುಭಾಷ ಗಂಗಾ ಆರೋಪಿಸಿದ್ದಾರೆ.
ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಆಡಳಿತ ಮಂಡಳಿ ಎರಡೂವರೆ ವರ್ಷದಿಂದ ಅಧಿಕಾರದಲ್ಲಿದ್ದು, ೧೦ ಲಕ್ಷ ಟನ್ ಕಬ್ಬು ಕ್ರಷಿಂಗ್ ಆಗಬೇಕಿತ್ತು. ಆದರೆ ಕೇವಲ ೫೦ ಸಾವಿರ ಟನ್ ಕ್ರಷಿಂಗ್ ನಡೆದಿದೆ. ಕಾರ್ಖಾನೆ ಸಾಮರ್ಥ್ಯದಂತೆ ಕನಿಷ್ಠ ಶೇ.೮೦ ಕ್ರಷಿಂಗ್ ಆದಾಗಲೇ ಲಾಭವಾಗುತ್ತದೆ. ಆದರೆ ಇಲ್ಲಿ ಎಲ್ಲವೂ ಗಾಳಿಗೆ ತೂರಿ ನಷ್ಟಕ್ಕೆ ದೂಡಲಾಗಿದೆ ಎಂದು ದೂರಿದರು.
ಕಾರ್ಖಾನೆಯಲ್ಲಿರುವ ಕಬ್ಬಿಣ, ಗಿಡಗಳನ್ನು ಮಾರಲಾಗಿದೆ. ಕಾರ್ಖಾನೆ ಪೆಟ್ರೊಲ್ ಬಂಕ್ ಖಾಸಗಿ ವ್ಯಕ್ತಿಗೆ ನೀಡಲಾಗಿದೆ. ೨೫ ಸಾವಿರ ಸದಸ್ಯ ರೈತರಿಗೆ ಅನ್ಯಾಯವಾಗುತ್ತಿದೆ. ೫೦೦, ೮೦೦ ಕೋಟಿ ರೂ. ಬಾಕಿ ಇರುವ ಕಾರ್ಖಾನೆಗಳು ನಡೆಯುತ್ತಿರುವಾಗ ೩೦೦ ಕೋಟಿ ಇರುವ ಬಿಎಸ್‌ಎಸ್‌ಕೆ ನಡೆಸಲು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸೆಪ್ಟೆಂಬರ್‌ನಲ್ಲಿ ವಾರ್ಷಿಕ ಮಹಾಸಭೆ ಕರೆಯಬೇಕಿತ್ತಾದರೂ ಕರೆದಿಲ್ಲ. ಕೂಡಲೇ ಸಭೆ ಕರೆದು ರೈತರಿಗೆ ಲೆಕ್ಕಪತ್ರ ನೀಡಬೇಕು. ಕಾರ್ಖಾನೆಯಲ್ಲಿ ದುರಾಡಳಿತ ನಡೆದಿದ್ದು, ತನಿಖೆ ನಡೆಸಿ ರೈತರ ಹಿತದೃಷ್ಟಿಯಿಂದ ಆಡಳಿತ ಮಂಡಳಿ ಸೂಪರ್‌ಸೀಡ್ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಬಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಬಸವರಾಜ ರತ್ನಾಪುರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net