ಬಿಎಸ್‌ಎಫ್ ಯೋಧ ಕೆ. ರಾಮಕೃಷ್ಣ ಹುತಾತ್ಮ

14 yerriswamy 04
Published on

ಬಳ್ಳಾರಿ : ಇಲ್ಲಿನ ಎಪಿಎಂಸಿ ಬಳಿಯ ಸುಲೇಮಾನ್ ಬೀದಿ ನಿವಾಸಿ ಬಿಎಸ್‌ಎಫ್ ಯೋಧ ಕೆ.ರಾಮಕೃಷ್ಣ (43) ಅಂತ್ಯಕ್ರಿಯೆ ಮಂಗಳವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಬೆಂಗಳೂರಿನಿಂದ ಬಳ್ಳಾರಿ ನಗರಕ್ಕೆ ಯೋಧನ ಮೃತ ದೇಹವನ್ನು ಇಲ್ಲಿನ ಎಂಜಿ ವೃತ್ತದಿಂದ ಎಪಿಎಂಸಿ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹಿರಿಯರು, ಯುವಕರು, ಮಕ್ಕಳು, ಮಹಿಳೆಯರು ಮೃತ ಯೋಧನ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಭಾರತದ ಪಶ್ಚಿಮ ಬಂಗಾಳ ಗಡಿಯಲ್ಲಿ ಬಿಎಸ್‌ಎಫ್ 145ನೇ ಬೆಟಾಲಿಯನ್‌ದಲ್ಲಿ ಹೆಡ್ ಕಾನ್ಸ್‌ಟೇಬಲ್‌ಯಾಗಿ ಯೋಧ ಕೆ.ರಾಮಕೃಷ್ಣ ಕಳೆದ 23 ವರ್ಷಗಳಿಂದ ಸೇವೆಯಲ್ಲಿದ್ದರು. ಮೇ 12 ರಂದು ಭಾನುವಾರ ಕೆಲಸ ಮುಗಿಸಿ ಕ್ಯಾಂಪ್‌ಗೆ ಮರಳಿದ ಬಳಿಕ ಮೃತಪಟ್ಟಿದ್ದಾನೆ. ಸಾವಿನ ಬಗ್ಗೆ ಇನ್ನೂ ನಿಖರ ಮಾಹಿತಿ ತಿಳಿದುಬಂದಿಲ್ಲ. ಯೋಧರಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪಾರ್ಥಿವ ಶರೀರದ ಪೆಟ್ಟಿಗೆಗೆ ರಾಷ್ಟ್ರಧ್ವಜ ಹಾಕಲಾಗಿತ್ತು. ಬಿಎಸ್‌ಎಫ್ ಸಿಬ್ಬಂದಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿ, ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಿದರು.
ಎಡಿಸಿ ಮೊಹಮ್ಮದ್ ಝುಬೇರ್, ಎಸಿ ಹೇಮಂತ್ ಕುಮಾರ, ತಹಸೀಲ್ದಾರ್ ಗುರುರಾಜ್, ರೈತ ಮುಖಂಡ ಮಾಧವರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net