

ಶೃಂಗೇರಿ: ನೆಮ್ಮಾರ್ ಗ್ರಾಮ ಪಂಚಾಯಿತಿ ಬುಕುಡಿಬೈಲಿನಲ್ಲಿ ಬಿಎಸ್‌ಎನ್‌ಎಲ್ ಟವರ್ ಇದ್ದರೂ ಕಳಪೆ ಮಟ್ಟದ ನಿರ್ವಹಣೆ ಹಾಗೂ ನೆಟ್‌ವರ್ಕ್ ಸಮಸ್ಯೆ ವಿರುದ್ಧ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ದಿವೀರ್ ಮಲ್ನಾಡು ಮಾತನಾಡಿ, ಮಲ್ನಾಡು ಹಾಗೂ ಹರೂರು ಗ್ರಾಮಗಳಲ್ಲಿ ಒಂದೂವರೆ ಸಾವಿರ ಗ್ರಾಮಸ್ಥರು ವಾಸವಾಗಿದ್ದು ಏಳೆಂಟು ವರ್ಷಗಳಿಂದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸರಿಯಾಗಿ ಸಿಗದೆ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೇವೆ. ಈ ಕುರಿತು ಈ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಜಿಲ್ಲೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಬುಕುಡಿಬೈಲು ದೂರವಾಣಿ ಕೇಂದ್ರದಲ್ಲಿ ಸಿಬ್ಬಂದಿ ಸಿಗುತ್ತಿಲ್ಲ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ನಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದೇವೆ ಎಂದರು.
ಖಾಸಗಿ ಟವರ್‌ಗಳ ನೆಟ್‌ವರ್ಕ್‌ಗಳು ಲಭ್ಯವಿದ್ದು, ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಬಿಎಸ್‌ಎನ್‌ಎಲ್ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು. ಕೆರೆಕಟ್ಟೆಯಲ್ಲಿ ಇಂತಹ ಸಮಸ್ಯೆ ಎದುರಾಗಿ ಮಹಿಳೆಯೊಬ್ಬರಿಗೆ ಅನಾರೋಗ್ಯ ಕಾಡಿದಾಗ ನೆಟ್‌ವರ್ಕ್ ಸಮಸ್ಯೆ ಎದುರಾಗಿದ್ದು ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗದೆ ಮೃತಪಟ್ಟರು. ಇಂತಹ ಅನಾಹುತ ನಮ್ಮ ಗ್ರಾಮದಲ್ಲಿ ಆಗಬಾರದು. ನೆಟ್‌ವರ್ಕ್ ಸಮಸ್ಯೆ ಹದಿನೈದು ದಿನಗಳಲ್ಲಿ ಸರಿಯಾಗದೆ ಇದ್ದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆ ಮುಂದೆ ಧರಣಿ ಮಾಡಲಾಗುವುದು ಎಂದು ಹೇಳಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ಬಿಎಸ್‌ಎನ್‌ಎಲ್ ಅಧಿಕಾರಿ ಬಿಜುಜೋಶ್ ಮಾತನಾಡಿ, ಇಲ್ಲಿನ ಸಮಸ್ಯೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಒಂದು ವಾರದ ಒಳಗೆ ಪರಿಹಾರ ನೀಡಲು ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದು ಎಂದರು. ರವಿ ಹರೂರು, ಶಿವಪ್ರಸಾದ್, ರವಿಚಂದ್ರ, ವಿಲಾಸ್, ಚಂದ್ರಾವತಿ, ಶೃಂಗೇಶ್ವರ ಇದ್ದರು.