

ಹಾಸನ: ಮಲೆನಾಡು, ಕಾಡಾನೆ ಹಾವಳಿ ಇರುವ ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆ ಸರಿಪಡಿಸಲು ಬಿಎಸ್‌ಎನ್‌ಎಲ್ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ಹಮ್ಮಿಕೊಂಡಿದ್ದ ದೂರವಾಣಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೊಸದಾಗಿ 11 ಬಿಎಸ್‌ಎನ್‌ಎಲ್ ಟವರ್‌ಗಳ ಅಳವಡಿಕೆಗೆ ಅನುಮತಿ ಪಡೆದು ಕೆಲಸ ಪ್ರಾರಂಭಿಸಲಾಗಿದೆ. ಎಲ್ಲಾ ತಾಲೂಕುಗಳ ಶಾಸಕರ ಸಲಹೆ, ಗ್ರಾಮ ಪಂಚಾಯಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡು ಹೆಚ್ಚು ಟವರ್‌ಗಳ ಅಳವಡಿಕೆಗೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯ 11 ಕಡೆಗಳಲ್ಲಿ 4ಜಿ ನೆಟ್ವರ್ಕ್ ಟವರ್ ಅಳವಡಿಕೆ ಕೆಲಸ ನಡೆಯುತ್ತಿದೆ. ಸಕಲೇಶಪುರ ತಾಲೂಕಿನಲ್ಲಿ ವೊಡಹಳ್ಳಿ, ಮಾಗೇರಿ, ಬಿಸ್ಲೆ, ಮಂಕನಹಳ್ಳಿ, ಕುಮಾರಹಳ್ಳಿ, ಕಡಗರವಳ್ಳಿ, ಬಾಳೆಹಳ್ಳ, ಎತ್ತಿನಹಳ್ಳ, ಅರಕಲಗೂಡು ತಾಲೂಕಿನಲ್ಲಿ ಒಂದು, ಅರಸೀಕೆರೆ ತಾಲೂಕಿನ ಡಿ.ಕಲ್ಲಹಳ್ಳಿಗಳಲ್ಲಿ ಒಂದು ಟವರ್ ಸ್ಥಾಪನೆ ಮಾಡಲಾಗುತ್ತಿದೆ. ಈ ಹಿಂದೆ ಬಿಎಸ್‌ಎನ್‌ಎಲ್‌ನಲ್ಲಿ 2ಜಿ, 3ಜಿ ಸೇವೆ ಇತ್ತು. ಇದೀಗ ಆತ್ಮನಿರ್ಭರ್ ಯೋಜನೆಯಡಿ ಎಲ್ಲಾ 2ಜಿ, 3ಜಿ ನೆಟ್ವರ್ಕ್‌ಗಳನ್ನು 4ಜಿ ಆಗಿ ಬದಲಾಯಿಸುವ ಕೆಲಸ ನಡೆಯುತ್ತಿದೆ. 194 ಟವರ್‌ಗಳಲ್ಲಿ 4ಜಿ ಅಳವಡಿಕೆ ಕಾರ್ಯ ನಡೆಯುತ್ತಿದೆ. ಬಾಕಿ 106 ಟವರ್‌ಗಳನ್ನು ಮುಂದಿನ ಹಂತದಲ್ಲಿ ಬದಲಾಯಿಸಲಾಗುವುದು. ಮಲೆನಾಡು ಭಾಗದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಪಡಿತರ ವಿತರಣೆ ಮಾಡಲು ಕಷ್ಟವಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕರು ದೂರು ನೀಡಿದ ಹಿನ್ನೆಲೆ ನೆಟ್ವರ್ಕ್ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಇದೀಗ ಬಿಎಸ್‌ಎನ್‌ಎಲ್ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ಇನ್ನು ಒಂದೂವರೆ ವರ್ಷದೊಳಗೆ ಖಾಸಗಿಯವರಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಸಂಸ್ಥೆಯನ್ನು ಬೆಳೆಸುವ ವಿಶ್ವಾಸವಿದೆ. ಬಹುತೇಕ ಸರ್ಕಾರಿ ಕಚೇರಿಗಳಿಗೆ ಬಿಎಸ್‌ಎನ್‌ಎಲ್ ನೆಟ್ವರ್ಕ್ ಬಳಸಿಕೊಳ್ಳಲಾಗುತ್ತಿದೆ. ಖಾಸಗಿ ವಲಯದಲ್ಲಿ ಶೇ.30ರಷ್ಟು ಮಾತ್ರ ನಾವು ಸೇವೆ ಒದಗಿಸಲು ಸಾಧ್ಯವಾಗುತ್ತಿದೆ. ಮುಂದಿನ ಒಂದು ವರ್ಷದಲ್ಲಿ ಶೇ.60- 65ಕ್ಕೆ ಹೆಚ್ಚಳ ಮಾಡಬೇಕು ಎಂಬ ಗುರಿಯನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಸಹಯೋಗದಲ್ಲಿರುವ ಸಂಸ್ಥೆಗಳ ಜತೆಯೂ ಚರ್ಚೆ ಮಾಡಲಾಗಿದೆ. ಹೆಚ್ಚು ಪ್ರಯೋಗಾತ್ಮಕವಾಗಿ ಪ್ರಚಾರ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬಿಎಸ್‌ಎಲ್‌ಎಲ್ ಅಧಿಕಾರಿಗಳು ಮಾತನಾಡಿ, ಸರ್ಕಾರಿ ಕಚೇರಿ ಮಾತ್ರವಲ್ಲದೆ, ಬ್ಯಾಂಕಿಂಗ್, ಅಂಚೆ, ಖಾಸಗಿ ಕಚೇರಿಗಳು, ಎಂಸಿಎಫ್, ನ್ಯಾಯಾಲಯಗಳಿಗೆ ನಾವು ಸೇವೆಯನ್ನು ಪೂರೈಕೆ ಮಾಡುತ್ತಿದ್ದೇವೆ. ವಿವಿಧ ಕಾಮಗಾರಿ, ಯುಜಿಡಿ ಮತ್ತಿತರರ ಕೆಲಸಗಳಿಗೆ ಭೂಮಿಯನ್ನು ಅಗೆಯುತ್ತಿರುವುದಿಂದ ಸಂಪರ್ಕ ಕಡಿತಗೊಂಡು ಕೆಲವೊಮ್ಮೆ ಸಮಸ್ಯೆಯಾಗುತ್ತಿದೆ. ಕೂಡಲೇ ಸರಿಪಡಿಸಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದರು:
ಸಭೆಯಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿಗಳ ವಿರುದ್ದ ಸಂಸದ ಪ್ರಜ್ವಲ್‌ರೇವಣ್ಣ ಗರಂ ಆಗಿ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ದಿಶಾ ಸಭೆಗೆ ಬರುತ್ತಿಲ್ಲ, ಸಭೆಗೆ ಬಾರದಿದ್ದರೆ ಸಮಸ್ಯೆ ಬಗೆಹರಿಸುವುದು ಹೇಗೆ? ಮುಂದೆ ಇದೇ ರೀತಿ ನೀವು ನಡೆದುಕೊಂಡರೆ ಸರಿ ಇರುವುದಿಲ್ಲ. ನಿಮ್ಮ ನಡವಳಿಕೆಯನ್ನು ಕೂಡಲೇ ಬದಲಾಯಿಸಿಕೊಳ್ಳಿ. ಮುಂದೆ ನಡೆಯುವ ಸಭೆಗಳಿಗೆ ಕಡ್ಡಾಯವಾಗಿದೆ ಹಾಜರಾಗುವಂತೆ ತಾಕೀತು ಮಾಡಿದರು.
ಬಿಎಸ್‌ಎನ್‌ಎಲ್ ಖಾಸಗೀಕರಣ ವಿರೋಧಿಸಿ, ಅಲ್ಲಿನ ನೌಕರರ ಹಿತ ಕಾಯುವಂತೆ ಸಂಸತ್‌ನಲ್ಲಿ ಧ್ವನಿ ಎತ್ತಿ ಸರ್ಕಾರ ಗಮನ ಸೆಳೆದು ಸಂಸ್ಥೆ ಉಳಿಸುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಅದೇ ರೀತಿ ಅಧಿಕಾರಿಗಳೂ ಕೂಡ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಜಿಲ್ಲೆಯ ಟೆಲಿಕಾಂ, ಅಂಚೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.