

ಅರಸೀಕೆರೆ: ಸರ್ವರಿಗೂ ಸಮಪಾಲು,ಸರ್ವರಿಗೂ ಸಮಬಾಳು ಎನ್ನುವ ಧ್ಯೇಯ ಹೊಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಾಮಾಜಿಕ ಕಳಕಳಿ ನಮ್ಮೆಲ್ಲರಿಗೂ ಮಾದರಿ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಮಾಡಾಳು ಗ್ರಾಮದ ನಿರಂಜನ ಪೀಠದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಪುಣ್ಯ ಸಂಸ್ಮರಣೆ ಹಾಗೂ ಅರಿವಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸತತ ಪರಿಶ್ರಮ ಹಾಗೂ ಹೋರಾಟದ ಮೂಲಕ ಬಿ.ಎಸ್.ಯಡಿಯೂರಪ್ಪನವರು 4ನೇಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ತಮಗೆ ಸಿಕ್ಕ ಅಧಿಕಾರದ ಅವಧಿಯಲ್ಲಿ ಬಡವರು, ದೀನದಲಿತರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಬಿ.ಎಸ್. ವೈ ಹೋರಾಟದ ಫಲವಾಗಿ ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಹಲವು ಕೆರೆಗಳಿಗೆ ನೀರು ಹರಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಅವರ ಹೋರಾಟ ನನಗೆ ಸ್ಫೂರ್ತಿಯಾಗಿದ್ದು ಮುಂದಿನ ನನ್ನ ರಾಜಕಾರಣಕ್ಕೆ ನಿಮ್ಮೆಲ್ಲರ ಆಶಿರ್ವಾದ ಇರಲಿ ಎಂದು ಮನವಿ ಮಾಡಿದರು.
ಸಾಣೆಹಳ್ಳಿ ಶ್ರೀ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರುದ್ರಮುನಿ ಸ್ವಾಮೀಜಿ, ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಪ್ರೀತಂಗೌಡ,ಬೆಳ್ಳಿಪ್ರಕಾಶ್, ವಿಧಾನ ಪರಿಷತ್ ಸದಸ್ಯ ಗೋಪಾಲ ಸ್ವಾಮಿ, ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜ್, ಸದಸ್ಯರಾದ ಜಿ.ಮರಿಸ್ವಾಮಿ, ಮಾಡಾಳು ಸ್ವಾಮಿ, ಮುಖಂಡರಾದ ಜಿ.ಬಿ.ಶಶಿಧರ್, ಜಿವಿಟಿ ಬಸವರಾಜ್ ,ಕೆ.ವಿ ಎನ್.ಶಿವು ಇದ್ದರು.