ಮೈಸೂರು: ಸಂವಿಧಾನ ಸಂರಕ್ಷಣೆಗಾಗಿ ರಾಜ್ಯವ್ಯಾಪಿ ಆರಂಭಗೊಂಡಿರುವ ಜೈಭೀಮ್ ಜನಜಾಗೃತಿ ಜಾಥಾ ನ.6 ರಂದು ಮೈಸೂರು ಜಿಲ್ಲೆಗೆ ಆಗಮಿಸಲಿದೆ ಎಂದು ಬಿಎಸ್‌ಪಿ ಸಂಚಾಲಕ, ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು.
ರಾಮನಗರದಿಂದ ಆರಂಭಗೊಂಡಿರುವ ಜಾಥಾ ಅಶೋಕಪುರಂ ಬಳಿ ಆಗಮಿಸಿ ನಂತರ ಗಾಂಧಿಚೌಕದಲ್ಲಿ ಕಾರ್ಯಕ್ರಮ ನಡೆಯಲಿದೆ. ಪಕ್ಷದ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂವಿಧಾನ ಆಶಯಗಳಿಗೆ ಅನುಗುಣವಾಗಿ ಆಡಳಿತ ನಡೆಸದ ಆಳುವ ಪಕ್ಷಗಳು ಕಾಪೋರೇಟ್ ಕಂಪನಿಗಳ ಪರ ಲಾಬಿ ನಡೆಸುತ್ತಿವೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ದಲಿತರು ಹಾಗೂ ಹಿಂದುಳಿದ ವರ್ಗದ ಜನರ ಜೀವನ ಮಟ್ಟ ಇನ್ನೂ ಸುಧಾರಣೆ ಕಂಡಿಲ್ಲ. ಜಾತಿ ಹೆಸರಿನಲ್ಲಿ ಇಂದಿಗೂ ದೌರ್ಜನ್ಯ ಹೆಚ್ಚುತ್ತಲೇ ಇದ್ದರೂ ಅದನ್ನು ತಡೆಗಟ್ಟುವಲ್ಲಿ ಸರ್ಕಾರಗಳು ಸೋತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಲೆ ಏರಿಕೆ, ಹಸಿವು, ಬಡತನ, ನಿರುದ್ಯೋಗದಂತಹ ಸಮಸ್ಯೆಗಳಿಂದ ಜನ ಕಂಗಾಲಾಗಿದ್ದಾರೆ. ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿರುವ ರಾಜಕೀಯ ಪಕ್ಷಗಳು ಜನರ ಹಿತ ಕಾಯುವಲ್ಲಿ ಸೋತಿವೆ. ಇಂತಹ ರಾಜಕೀಯ ಪಕ್ಷಗಳ ಬಗ್ಗೆ ದಲಿತ ಸಮುದಾಯಗಳು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಪುಟ್ಟಸ್ವಾಮಿ, ನಗರ ಅಧ್ಯಕ್ಷ ಶ್ರೀನಿವಾಸ್‌ಪ್ರಸಾದ್, ಕೆ.ಆರ್ ಕೇತ್ರದ ಅಧ್ಯಕ್ಷ ಸುನೀಲ್ ಇದ್ದರು.