

ಕಮಲನಗರ: ತಾಲೂಕಿನ ಮದನೂರ ಗ್ರಾಪಂ ಅಖಾಡದಲ್ಲಿದ್ದ ಬಿಇಡಿ ವಿದ್ಯಾರ್ಥಿನಿ ಪೂಜಾ ಗುಂಡಪ್ಪ ಬೆಲ್ಲೆ (25) ಅವರು ಜಿಲ್ಲೆಯಲ್ಲೇ ಅತಿ ಹೆಚ್ಚು ಮತ ಹಾಗೂ ಹೆಚ್ಚಿನ ಅಂತರದಿಂದ ಜಯ ಗಳಿಸಿ ದಾಖಲೆ ಮಾಡಿದ್ದಾರೆ. ಮದನೂರಿನ ವಾಡ್೯ ಸಂಖ್ಯೆ 2ರ ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪೂಜಾ ಅವರು 588 ಮತ ಗಳಿಸಿ, ಪ್ರತಿಸ್ಪರ್ಧಿ ಬಾಯಮ್ಮ ಅವರಿಗೆ 347 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪೂಜಾ ಅವರು ಡಿಇಡಿ, ಬಿಎ ಪದವೀಧರರಾಗಿದ್ದು, ಸದ್ಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಬಿಇಡಿ ಮೂರನೇ ಸೆಮ್ ಓದುತ್ತಿದ್ದಾರೆ. ಜನಪರ, ಸಮಾಜಪರ ಕಾಳಜಿಯುಳ್ಳ ಪೂಜಾ ಅವರು ಗ್ರಾಪಂ ಮೂಲಕ ಗ್ರಾಮ ವಿಕಾಸದ ಕೆಲಸದಲ್ಲಿ ತೊಡಗುವ ಧ್ಯೇಯ ಹೊಂದಿ ಕಣಕ್ಕಿಳಿದಿದ್ದರು. ಇವರ ಆಶಯಕ್ಕೆ ಮನ್ನಿಸಿ ಸ್ಥಳೀಯರು ಭರಪೂರ ಸಾಥ್ ನೀಡಿ ಭರ್ಜರಿ ಜಯ ಕೊಟ್ಟಿದ್ದಾರೆ. ಪೂಜಾ ಅವರ ಪತಿ ಗುಂಡಪ್ಪ ಹೊಸಪೇಟೆಯಲ್ಲಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.